ಬೆಂಗಳೂರು:ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಕೊಲೆ ಆರೋಪಿ ಕಾಲಿಗೆ ಖಾಕಿ ಪಡೆ ಗುಂಡು ಹಾರಿಸಿರುವ ಘಟನೆ ನಗರದ ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಕೊಲೆ ಆರೋಪಿ ಕಾಲಿಗೆ ಗುಂಡೇಟು ಕಳೆದೆರಡು ದಿನಗಳ ಹಿಂದೆ ರೌಡಿಶೀಟರ್ ಭಟ್ಟಿ ಅಮ್ಜಾದ್ ಎಂಬಾತನನ್ನ ಭೀಕರವಾಗಿ ರಸ್ತೆಯಲ್ಲಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಆರೋಪಿ ಯೂನೀಸ್ ಸೇರಿದಂತೆ ಒಟ್ಟು 11 ಜನರ ತಂಡವನ್ನು ಬಂಧಿಸಿದ್ದ ಡಿಜೆ ಹಳ್ಳಿ ಪೊಲೀಸರು ಇಂದು ಬೆಳಗ್ಗೆ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ವಶಕ್ಕೆ ಪಡೆಯಲು ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಪ್ರಮುಖ ಆರೋಪಿ ಯೂನೀಸ್ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಆತ್ಮರಕ್ಷಣೆಗೆ ಡಿಜೆ ಹಳ್ಳಿ ಇನ್ಸ್ಪೆಕ್ಟರ್ ಕೇಶವಮೂರ್ತಿ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಸದ್ಯ ಆರೋಪಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದ ಹಿನ್ನೆಲೆ:ಕೊಲೆಯಾದ ಅಮ್ಜಾದ್ ಹಾಗೂ ಯೂನೀಸ್ ಮೊದಲು ಒಂದೇ ಗ್ಯಾಂಗ್ನಲ್ಲಿದ್ದರು. ಇದೇ ಟೀಂನಲ್ಲಿ ಶಿವಾಜಿನಗರ ರೌಡಿ ಶೀಟರ್ ಇದ್ರಿಸ್ ಕೂಡ ಇದ್ದ. ದ್ವೇಷದ ಹಿನ್ನೆಲೆ 2018ರಲ್ಲಿ ಭಟ್ಟಿ ಅಮ್ಜಾದ್ ತಮ್ಮದೇ ಗ್ಯಾಂಗ್ನ ಇದ್ರೀಸ್ ಎಂಬಾತನನ್ನ ಕೊಲೆ ಮಾಡಿದ್ದ. ಯೂನೀಸ್ಗೆ ಇದ್ರಿಸ್ ಬಾಮೈದನಾಗಿದ್ದ. ಹೀಗಾಗಿ ಕೊಲೆ ಮಾಡಿದ ದ್ವೇಷಕ್ಕೆ ಅಮ್ಜಾದ್ನನ್ನ ಯೂನೀಸ್ ತಂಡ ಕೊಲೆ ಮಾಡಿದೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗ್ತಿದೆ.
ಈ ಕುರಿತು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಮಾತನಾಡಿ, ಕಳೆದೆರಡು ದಿನಗಳ ಹಿಂದೆ ಡಿಜೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾಗಿತ್ತು. ಹೀಗಾಗಿ ಎಸಿಪಿ ನೇತೃತ್ವದಲ್ಲಿ ತಂಡ ರಚನೆ ಮಾಡಿ 11 ಜನ ಆರೋಪಿಗಳನ್ನ ಬಂಧಿಸಲಾಗಿತ್ತು. ಇಂದು ಸ್ಥಳ ಮಹಜರು ಮಾಡುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಆತ್ಮರಕ್ಷಣೆಗೆ ಕಾಲಿಗೆ ಗುಂಡು ಹಾರಿಸಿದ್ದೇವೆ ಎಂದು ತಿಳಿಸಿದರು.