ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಜಾರಿಯಲ್ಲಿರುವ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ವಾಹನ ಜಪ್ತಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಭಾನುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 8ರವರೆಗಿನ ಕಾರ್ಯಾಚರಣೆಯಲ್ಲಿ 547 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಕೋವಿಡ್ ನಿಯಮ ಉಲ್ಲಂಘನೆ: ಬೆಂಗಳೂರಲ್ಲಿ 547 ವಾಹನ ಜಪ್ತಿ
ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ 547 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ವಾಹನ ತಪಾಸಣೆ- ಸಾಂದರ್ಭಿಕ ಚಿತ್ರ
459 ದ್ವಿಚಕ್ರ ವಾಹನ, 30 ಮೂರು ಚಕ್ರದ ವಾಹನ ಹಾಗೂ 58 ನಾಲ್ಕು ಚಕ್ರದ ವಾಹನಗಳನ್ನು ಸೀಜ್ ಮಾಡಲಾಗಿದೆ. ಒಟ್ಟು 14 ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್.ಡಿ.ಎಂ.ಎ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.