ಬೆಂಗಳೂರು:ರೈತರು ಕೃಷಿಯಲ್ಲಿ ಯಶಸ್ವಿಯಾಗಬೇಕಾದರೆ ತಾವು ಬೆಳೆಯುವ ಬೆಳೆಗಳ ಖರ್ಚು ವೆಚ್ಚಗಳತ್ತ ಹೆಚ್ಚು ಗಮನ ಹರಿಸಬೇಕು. ಆಗ ಮಾತ್ರ ರೈತರು ಅರ್ಥಿಕವಾಗಿ ಸದೃಢವಾಗಲು ಸಾಧ್ಯ. ಕೃಷಿಕರು ಬೆಳೆದ ಉತ್ಪನ್ನಗಳನ್ನು ತಾವೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕೌಶಲ್ಯತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪಿ.ಜಿ. ಚಂಗಪ್ಪ ಹೇಳಿದರು.
ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳ-2023 ರ ಮಂಡ್ಯ ಮತ್ತು ತುಮಕೂರು ಜಿಲ್ಲಾ ಮಟ್ಟದ ಪ್ರಗತಿಪರ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳು ಮತ್ತು ಹಾಸನ ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ತಾಲೂಕು ಮಟ್ಟದ ಅತ್ಯುತ್ತಮ ಯುವರೈತ ಹಾಗೂ ರೈತ ಮಹಿಳಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೃಷಿ ವಲಯಕ್ಕೆ ಬೇಡಿಕೆ: ಮುಂದಿನ ದಿನಗಳಲ್ಲಿ ಕೃಷಿ ವಲಯಕ್ಕೆ ಬೇಡಿಕೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ರೈತರು ಹೆಮ್ಮೆಯಿಂದ ಕೃಷಿಯನ್ನು ಕೈಗೊಳ್ಳಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತರು ಇತರರೊಂದಿಗೆ ಸ್ಪರ್ಧೆಯನ್ನು ಎದುರಿಸಲು ಸಂಘಟಿತರಾಗಬೇಕು. ಆದರೆ ಇಂದಿನ ದಿನಗಳಲ್ಲಿ ಕೆಲವೊಮ್ಮೆ ತಾವು ಬೆಳೆದ ಬೆಳೆಗೆ ಬೆಲೆ ಸಿಗದೇ ನಷ್ಟ ಅನುಭವಿಸಿದ್ದು ಉಂಟು. ಇದರಿಂದಾಗಿ ಬೆಳೆಗಾರರ ಸಂಘ, ಬೆಳಗಾರರ ಸಂಸ್ಥೆ ಮತ್ತು ಸ್ವ ಸಹಾಯ ಸಂಘ, ಸಹಕಾರಿ ಸಂಘಗಳ ಮೂಲಕ ಸಂಘಟಿತರಾಗಿ ಮಾರಾಟ ಮಾಡಲು ದೃಢವಾದ ಹೆಜ್ಜೆ ಇಡುವುದು ಇಂದಿನ ಬದಲಾಗುತ್ತಿರುವ ದಿನಗಳಲ್ಲಿ ಅನಿವಾರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.