ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತಕ್ಕೆ ನಾಲ್ಕೂ ಇಲಾಖೆಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಹೀಗಾಗಿ ಇರುವ ಕಾಯಿದೆಗಳಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಿ ಅಗ್ನಿ ದುರಂತ ಹಾಗೂ ಪಟಾಕಿ ಅವಘಡಗಳಿಗೆ ಅಂತ್ಯ ಹಾಡುವಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು. ಪಟಾಕಿ ದುರಂತ ರಾಜ್ಯಕ್ಕೊಂದು ಪಾಠ, ಇದರಿಂದ 17 ಮಂದಿ ಈ ವರೆಗೆ ಸಾವಿಗೀಡಾಗಿದ್ದಾರೆ. ಅವರಿಗೆ ದೇವರು ಸದ್ಗತಿ ಒದಗಿಸಲಿ ಎಂದು ಸಂತಾಪ ಸೂಚಿಸಿದರು. ಹೆಚ್ಚುತ್ತಿರುವ ಪಟಾಕಿ ಹಾಗೂ ಅಗ್ನಿ ದುರಂತಗಳಿಗೆ ಕಡಿವಾಣ ಹಾಕಲು ರಾಜ್ಯಾದ್ಯಂತ ಅನ್ವಯಿಸುವಂತೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಿ ಕಾಯಿದೆಗಳಿಗೆ ಮಾರ್ಪಾಡು ಮಾಡಿ ಕಠಿಣ ಕ್ರಮಗಳಿಗಾಗಿ ಯೋಜಿಸಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ: ದೀಪಾವಳಿ ಸಮೀಪಿಸುತ್ತಿರುವುದರಿಂದ ಪಟಾಕಿ ನಿಷೇಧಕ್ಕೆ ಸಾಧಕ ಬಾಧಕ ಕುರಿತು ಯೋಚಿಸಲಾಗುತ್ತಿದೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪಟಾಕಿ ನಿಷೇಧ ಪ್ರಾಯೋಗಿಕ ಜಾರಿಗೊಳಿಸಿ ಯಶಸ್ವಿಯಾದರೆ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು. ಈಗಾಗಲೇ ದೆಹಲಿಯಲ್ಲಿ ಪಟಾಕಿ ನಿಷೇಧಿಸಲಾಗಿದೆ. ಸರ್ಕಾರ ಆದೇಶಿಸಿರುವಂತೆ ಯಾವುದೇ ಪಕ್ಷದ ಕಾರ್ಯಕ್ರಮಗಳಿಗೆ ಪಟಾಕಿ ನಿಷೇಧಿಸಲಾಗಿದೆ. ಇನ್ನು ಹಬ್ಬಗಳ ಪಟಾಕಿ - ಸ್ಪೋಟಕ ಅಗ್ನಿ ದುರಂತಗಳಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಇಂತಹ ದುರಂತಗಳು ಮತ್ತೆ ಮರುಕಳಿಸಬಾರದು ಎಂದು ಸೂಚಿಸಿದರು.
ಅತ್ತಿಬೆಲೆ ದುರಂತ ನಾಲ್ಕು ಇಲಾಖೆಗಳು ಹೊಣೆ:ಅತ್ತಿಬೆಲೆ ದುರಂತಕ್ಕೆ ಕಂದಾಯ, ಪೊಲೀಸ್, ಅಗ್ನಿ ಶಾಮಕವಷ್ಟೇ ಅಲ್ಲದೇ ರಸ್ತೆ ಸಂಚಾರ ಚೆಕ್ ಪೊಸ್ಟ್ ಗಳು ಕಾರಣವಾಗಿವೆ. ಯಾವುದೇ ಸ್ಪೋಟಕಗಳನ್ನು ಸಾಗಣೆ ಮಾಡುವ ಸಂದರ್ಭದಲ್ಲಿ ಎಲ್ಎ7 ನಿಯಮ ಪಾಲಿಸಿ ಪರವಾನಗಿ ಅನುಮತಿ ಪಡೆದಿರಬೇಕು. ಆದರೆ, ತಮಿಳುನಾಡಿಂದ ಬಂದ ಸಾಗಣೆ ವಾಹನ ಎಲ್ಎ5 ಪರವಾನಗಿ ಮಾತ್ರ ಹೊಂದಿದ್ದು, ಇದು ಸಹ ದುರಂತಕ್ಕೆ ಕಾರಣವಾಗಿದೆ. ಸಿಐಡಿ ತಿಳಿಸಿರುವ ವರದಿಯನ್ನು ಒಳಗೊಂಡಂತೆ ನ್ಯಾಯಾಂಗ ತನಿಖೆಗೆ ರಾಜ್ಯಪಾಲರ ಶಿಫಾರಸ್ಸಿನಂತೆ ಸರ್ಕಾರ ಆದೇಶಿಸಿದೆ. ಹೀಗಾಗಿ ಮೂರು ತಿಂಗಳ ಗಡುವಿನಲ್ಲಿ ಸಮರ್ಪಕ ಕೂಲಂಕಷ ತನಿಖೆಯ ವರದಿ ಬರಬೇಕಿದೆ.