ಕರ್ನಾಟಕ

karnataka

ETV Bharat / state

ಪ್ರವಾಸಿ ವೀಸಾದಡಿ ಬಂದು ಧರ್ಮ ಪ್ರಚಾರ: 19 ವಿದೇಶಿಯರಿಗೆ ಷರತ್ತುಬದ್ಧ ಜಾಮೀನು! - Bail for foreign accused

ಭಾರತೀಯ ವಿದೇಶಾಂಗ ಕಾಯ್ದೆ ಉಲ್ಲಂಘನೆ, ವೀಸಾ ದುರ್ಬಳಕೆ ಮತ್ತು ಅನಧಿಕೃತವಾಗಿ ಧರ್ಮ ಪ್ರಚಾರದಲ್ಲಿ ತೊಡಗಿದ್ದ ಆರೋಪದಡಿ ಬಂಧಿತರಾಗಿದ್ದ 19 ಮಂದಿ ವಿದೇಶಿ ಪ್ರಜೆಗಳಿಗೆ ನಗರದ 37ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

Bail for 19 foreign accused
Bail for 19 foreign accused

By

Published : Jul 16, 2020, 8:18 PM IST

ಬೆಂಗಳೂರು:ದೇಶಕ್ಕೆ ಪ್ರವಾಸಿ ವೀಸಾ ಮೂಲಕ ಬಂದು ಧಾರ್ಮಿಕ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಆರೋಪದಡಿ ಬಂಧಿತರಾಗಿದ್ದ 19 ಮಂದಿ ವಿದೇಶಿ ಪ್ರಜೆಗಳಿಗೆ ನಗರದ 37ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಅಹ್ಮದ್ ಜೈನಿ ಮತ್ತು ಮಹ್ಮದ್ ಫೈಸಲ್ ಸೇರಿದಂತೆ ಇಂಡೋನೇಷ್ಯಾದ 10 ಮತ್ತು ಕಜಕಿಸ್ತಾನದ 9 ಮಂದಿ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಪರಿಗಣಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ 19 ಜನರಿಗೂ ಷರತ್ತುಬದ್ಧ‌ ಜಾಮೀನು ಕರುಣಿಸಿದೆ.

ಆರೋಪಿಗಳು ತಲಾ ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಇಬ್ಬರು ವ್ಯಕ್ತಿಗಳ ಅಥವಾ 10 ಸಾವಿರ ರೂ. ಮೊತ್ತದ ಪ್ರತ್ಯೇಕ ಭದ್ರತಾ ಖಾತರಿ ಒದಗಿಸಬೇಕು. ಬಿಡುಗಡೆಯಾದ ಮೇಲೆ‌ ಮತ್ತೆ ಇಂತಹುದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಬಾರದು.‌ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂಬ ಇತ್ಯಾದಿ ಷರತ್ತುಗಳನ್ನು ಪಾಲಿಸಬೇಕೆಂದು ಕೋರ್ಟ್ ಆದೇಶಿಸಿದೆ.
ಅಲ್ಲದೆ, ತನಿಖಾಧಿಕಾರಿಗಳು ಜೈಲಿನಿಂದ ಬಿಡುಗಡೆಯಾದ ಆರೋಪಿಗಳನ್ನು ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಬೆಂಗಾವಲಿನೊಂದಿಗೆ ಡಿಟೆನ್ಷನ್ ಸೆಂಟರ್ ಅಥವಾ ಇತರೆ ಯಾವುದಾದರೂ ಪ್ರದೇಶದಲ್ಲಿ ಸುರಕ್ಷಿತವಾಗಿ ಇರಿಸಬೇಕು ಎಂದು ನಿರ್ದೇಶಿಸಿದೆ.

ಆರೋಪಿಗಳು ಪ್ರವಾಸಿ ವೀಸಾದ ಮೂಲಕ ದೆಹಲಿಗೆ ಬಂದು ಜಮಾತ್ ಧರ್ಮ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನಂತರ ಬೆಂಗಳೂರಿಗೆ ಬಂದು ಪಾದರಾಯನಪುರ ಮಸೀದಿಯಲ್ಲಿ ಆಶ್ರಯ ಪಡೆದಿದ್ದರು.‌ ಭಾರತೀಯ ವಿದೇಶಾಂಗ ಕಾಯ್ದೆ ಉಲ್ಲಂಘನೆ, ವೀಸಾ ದುರ್ಬಳಕೆ ಮತ್ತು ಅನಧಿಕೃತವಾಗಿ ಧರ್ಮ ಪ್ರಚಾರದಲ್ಲಿ ತೊಡಗಿದ್ದ ಆರೋಪದ ಮೇಲೆ ಜೆ.ಜೆ. ‌ನಗರ ಪೊಲೀಸರು ಇವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆರೋಪಿಗಳ ಪರ ವಕೀಲ ಸಿರಾಜುದ್ದೀನ್ ಅಹ್ಮದ್ ವಾದ ಮಂಡಿಸಿದ್ದರು. ಸದ್ಯ ಇವರೆಲ್ಲರಿಗೂ ಷರತ್ತುಬದ್ಧ‌ ಜಾಮೀನು ಸಿಕ್ಕಿದೆ.

ABOUT THE AUTHOR

...view details