ಬೆಂಗಳೂರು: ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಆರ್ ಅಶೋಕ್ ಅವರು ಪ್ರತಿಪಕ್ಷದ ನಾಯಕರಾಗಿ ಇಂದು ಆಯ್ಕೆಯಾಗಿದ್ದಾರೆ.
ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಅಶೋಕ್ ಅವರು ಶಾಸಕರಾಗಿ, ಸಚಿವರಾಗಿ ಹಾಗೂ ಉಪ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದಾರೆ. ಅಶೋಕ್ ಅವರ ಹಿನ್ನೆಲೆ ಹಾಗೂ ಅವರು ನಡೆದು ಬಂದ ದಾರಿ ನೋಡುವುದಾದರೆ, (ಜಾಲಹಳ್ಳಿ ರಾಮಯ್ಯ ಅಶೋಕ) ಇವರು 1957 ಜುಲೈ 1 ರಂದು ಜಾಲಹಳ್ಳಿಯಲ್ಲಿ ತಂದೆ ರಾಮಯ್ಯ, ತಾಯಿ ಶ್ರೀಮತಿ ಆಂಜಿನಮ್ಮ ಅವರ ಮಗನಾಗಿ ಜನಿಸಿದರು.
ಪ್ರಾಥಮಿಕ ವಿದ್ಯಾಭ್ಯಾಸವನ್ನು ಜಾಲಹಳ್ಳಿಯಲ್ಲಿ ಪೂರೈಸಿದ್ದು, ವಿ.ವಿ.ಪುರಂ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ತಮ್ಮ 10ನೇ ವಯಸ್ಸಿನಲ್ಲಿಯೇ ಆರ್ಎಸ್ಎಸ್ಗೆ ಸೇರ್ಪಡೆಯಾಗಿ, 1975-77ರಲ್ಲಿ ಪ್ರಧಾನಮಂತ್ರಿ ಇಂದಿರಾಗಾಂಧಿಯವರು ವಿಧಿಸಿದ್ದಂತಹ ತುರ್ತು ಪರಿಸ್ಥಿತಿಯ ಸಮಯದಲ್ಲಿ ಎಲ್.ಕೆ ಅಡ್ವಾಣಿಯಂತಹ ಹಿರಿಯ ನಾಯಕರೊಂದಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಒಂದು ತಿಂಗಳುಗಳ ಕಾಲ ಕಾರಾಗೃಹ ವಾಸ ಅನುಭವಿಸಿದ್ದರು. 1995ರಲ್ಲಿ ಬಿಜೆಪಿಯ ಬೆಂಗಳೂರು ನಗರ ಅಧ್ಯಕ್ಷರಾಗಿ ನೇಮಕವಾಗಿದ್ದರು.
97 ರಲ್ಲಿ ಉತ್ತರಹಳ್ಳಿಯಿಂದ ಆಯ್ಕೆ:1997 ರಲ್ಲಿ ಕರ್ನಾಟಕ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ನಂತರ 1999 ಮತ್ತು 2004ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತ್ರ ಪುನರ್ ವಿಂಗಡನೆಯ ನಂತರ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ 2008, 2013, 2018, 2023 ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗಳಲ್ಲಿ ಸತತವಾಗಿ ವಿಜಯ ಸಾಧಿಸುವ ಮೂಲಕ 7ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
2006-07 ರಲ್ಲಿ ಆರೋಗ್ಯ ಸಚಿವ:2006-2007ರಲ್ಲಿನ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕರ್ತವ್ಯ ನಿರ್ವಹಿದ್ದರು. ಈ ಸಮಯದಲ್ಲಿ ಮಡಿಲು ಕಿಟ್ ಎಂಬ ನೂತನ ಯೋಜನೆಯನ್ನು ಅನುಷ್ಠಾನ ಗೊಳಿಸುವ ಮೂಲಕ ಅಸಂಖ್ಯಾತ ಬಡ ಕುಟುಂಬದ ನವಜಾತ ಶಿಶುಗಳಿಗೆ ಮಡಿಲು ಕಿಟ್ ದೊರೆಯುವಂತೆ ಮಾಡಿದ್ದರು. ಜೊತೆಗೆ ಹಲವು ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಿದ್ದರು. ಗ್ರಾಮೀಣ ಭಾಗದಲ್ಲಿಯೂ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ಹಲವು ನಕಲಿ ಡಾಕ್ಟರ್‌ಗಳ ಹಾವಳಿಯನ್ನು ತಡೆಯಲು ಶ್ರಮಿಸಿದ್ದರು.
2008-2010ರ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಾರಿಗೆ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು, ಗ್ರಾಹಕರ ವ್ಯವಹಾರ ಖಾತೆಗಳ ಸಚಿವರಾಗಿ ಹತ್ತು ಹಲವು ಕಾರ್ಯಗಳನ್ನು ಮಾಡಿದ್ದಾರೆ, ಸಾರಿಗೆ ಇಲಾಖೆಯ ಆಧುನೀಕರಣಕ್ಕೆ ಮತ್ತು ನೂತನ ಸಾರಿಗೆ ಬಸ್‌ಗಳ ವ್ಯವಸ್ಥೆ ಮತ್ತು ನೂತನ ಬಸ್ ನಿಲ್ದಾಣಗಳ ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. (2010-2012) ಸಾರಿಗೆ ಸಚಿವರು ಮತ್ತು ಗೃಹ ಸಚಿವರಾಗಿರುವ ಸಮಯದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಗೃಹ ಇಲಾಖೆಯ ದಕ್ಷ ನಿರ್ವಹಣೆಯನ್ನು ಮಾಡಿದ್ದರು. ಜೊತೆಗೆ ಜನ ಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು.