ಬೆಂಗಳೂರು :ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದು, ನಾಳೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಚಿತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಇಂದು ಮಧ್ಯಾಹ್ನ ಪರಿಷತ್ ಸದಸ್ಯ ಸ್ಥಾನಕ್ಕೆ ಬಾಬೂರಾವ್ ಚಿಂಚನಸೂರ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಕೈ ಬರಹದಲ್ಲೇ ರಾಜೀನಾಮೆ ಪತ್ರ ಬರೆದು ಕೊಟ್ಟಿರುವ ಚುಂಚನಸೂರ್, ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿರೋದಾಗಿ ವಿಧಾನಸಭಾ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬರೆದಿದ್ದಾರೆ. ಚಿಂಚನಸೂರ್ ರಾಜೀನಾಮೆ ಅಂಗೀಕಾರಗೊಂಡಿದೆ ಎಂದು ಸಭಾಪತಿ ಕಚೇರಿ ಮೂಲಗಳು ತಿಳಿಸಿವೆ.
ಬಿಜೆಪಿ ಟಿಕೆಟ್ ಕೈ ತಪ್ಪುವುದು ಖಾತ್ರಿ, ಕಾಂಗ್ರೆಸ್ ಸೇರ್ಪಡೆ :ಕೆಲ ತಿಂಗಳ ಹಿಂದೆಯೇ ಬಿಜೆಪಿ ಬಿಡಲು ಯೋಜಿಸಿದ್ದ ಚಿಂಚನಸೂರ್ ಅವರ ಮನವೊಲಿಕೆ ಮಾಡಲಾಗಿತ್ತು. ಜೊತೆಗೆ ಫೆ.13 ರಂದು ಚಿಂಚನಸೂರ್ ಜತೆ ಮಾತುಕತೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವೊಲಿಸುವಲ್ಲಿ ಸಫಲರಾಗಿದ್ದರು. ಸಿಎಂ ಬೊಮ್ಮಾಯಿ ಸಂಧಾನಕ್ಕೆ ಒಪ್ಪಿಕೊಂಡಿದ್ದ ಚಿಂಚನಸೂರ್ ಅವರು ಬಳಿಕ ಖರ್ಗೆ ಪುತ್ರನನ್ನು ಸೋಲಿಸೋದಾಗಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ತೊಡೆ ತಟ್ಟಿದ್ದರು. ಆದರೆ ಇದೀಗ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತೊಡೆ ತಟ್ಟಿದ್ದವರ ಬಳಿಗೆ ತೆರಳುತ್ತಿದ್ದಾರೆ.
ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ವಿಧಾನಸಭೆ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ಸಂದೇಶ ರವಾನಿಸಿರುವುದರಿಂದ ನಿರಾಶರಾಗಿರುವ ಚಿಂಚನಸೂರ್ ಇದೀಗ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಮಂಗಳವಾರ ಬಿಜೆಪಿಗೂ ರಾಜೀನಾಮೆ ನೀಡಲಿದ್ದು, ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂದು ತಿಳಿದುಬಂದಿದೆ.
2008 ಮತ್ತು 2013 ರಲ್ಲಿ ಗುರುಮಿಟ್ಕಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಚಿಂಚನಸೂರ್ 2018 ರಲ್ಲಿ ಪರಾಭವಗೊಂಡಿದ್ದರು, 2019 ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ರುಚಿ ತೋರಿಸುವಲ್ಲಿ ಪಾತ್ರ ವಹಿಸಿದ್ದರು. ಇದೀಗ 2023 ರ ಚುನಾವಣೆಯಲ್ಲಿ ಗುರುಮಿಟ್ಕಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಚಿಂಚನಸೂರ್ ಅವರು ಬಿಜೆಪಿ ಟಿಕೆಟ್ ಕೈ ತಪ್ಪುವುದು ಖಾತ್ರಿಯಾಗುತ್ತಿದ್ದಂತೆ ಬಿಜೆಪಿ ತೊರೆಯಲು ಸಿದ್ಧರಾಗಿದ್ದಾರೆ.
ವಿಧಾನ ಪರಿಷತ್ಗೆ ಅವಿರೋಧ ಆಯ್ಕೆ :ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ಪರಿಷತ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಬು ರಾವ್ ಚಿಂತನಸೂರ್ ಅವಿರೋಧವಾಗಿ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದರು ಇದೀಗ ಅವರೂ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆಯುತ್ತಿದ್ದಾರೆ. ಇತ್ತೀಚೆಗಷ್ಟೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಪುಟ್ಟಣ್ಣ ರಾಜೀನಾಮೆ ಸಲ್ಲಿಕೆ ಮಾಡಿದ್ದರು, ನಂತರ ಬಿಜೆಪಿಯನ್ನೂ ತೊರೆದು ಕಾಂಗ್ರೆಸ್ ಸೇರುವ ಘೋಷಣೆ ಮಾಡಿದರು. ಅದರ ಬೆನ್ನಲ್ಲೇ ಬಿಜೆಪಿಯ ಮತ್ತೋರ್ವ ಎಂಎಲ್ಸಿ ರಾಜೀನಾಮೆ ನೀಡಿ ಬಿಜೆಪಿಯಿಂದ ಹೊರ ನಡೆಯುತ್ತಿದ್ದಾರೆ.
ಇದನ್ನೂ ಓದಿ :ಕಾಂಗ್ರೆಸ್ ಕಾರ್ಯಕರ್ತರಿಂದ ಮತದಾರರ ಮಾಹಿತಿ ಸಂಗ್ರಹ ಆರೋಪ : ಚುನಾವಣಾ ಅಧಿಕಾರಿಗೆ ಬಿಜೆಪಿ ದೂರು