ಬೆಂಗಳೂರು:ಲಾಕ್‌ಡೌನ್ ಸಡಿಲಿಕೆಯ ನಂತರ ಹೊಸ ವಾಹನಗಳ ಬೇಡಿಕೆಯು, ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಲಾಕ್‌ಡೌನ್ ತೆರವುಗೊಳಿಸಿದ ನಂತರ ಮಂದಗತಿಯಲ್ಲಿದ್ದ ಹೊಸ ವಾಹನ ಮಾರಾಟವು, ಇದೀಗ ಏರಿಕೆಯಾಗುತ್ತಿದೆ. ಇದೀಗ ಹಬ್ಬಗಳ ಸಂಭ್ರಮದಲ್ಲಿ ವಾಹನ ಖರೀದಿ ಭರಾಟೆ ಶುರುವಾಗಿದೆ.
ಬಹುತೇಕ ಜನರು ಸಾರ್ವಜನಿಕ ಸಾರಿಗೆ ಬಳಕೆಯಿಂದ ಹಿಂದೆ ಸರಿದು, ಸ್ವಂತ ವಾಹನ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ. ಲಾಕ್‌ಡೌನ್‌ದಿಂದ ಆರ್ಥಿಕ ಸ್ಥಿತಿ ಬಿಗಡಾಯಿಸಿದ್ದರಿಂದ ಜನ ಹೊಸ ವಾಹನಗಳ ಖರೀದಿಗೆ ಮುಂದಾಗುವುದಿಲ್ಲ ಎಂದೇ ಅಟೋಮೊಬೈಲ್ ಕ್ಷೇತ್ರದವರು ಅಂದುಕೊಂಡಿದ್ದರು. ಆದರೆ ಹೊಸ ಕಾರು, ಬೈಕ್ ಖರೀದಿಗೆ ಹಣ ಕೂಡಿಟ್ಟವರು, ಬ್ಯಾಂಕ್ ಸಾಲ ಪಡೆದುಕೊಂಡವರು ಶೋ ರೂಂನಿಂದ ವಾಹನ ಖರೀದಿಸುತ್ತಿದ್ದಾರೆ.
ಬೆಂಗಳೂರಿನ ಯಶವಂತಪುರ, ರಾಜಾಜಿನಗರ, ಎಲೆಕ್ಟಾನಿಕ್ ಸಿಟಿ ಆರ್.ಟಿ.ಒ ಕಚೇರಿಗಳಲ್ಲಿ ಹೆಚ್ಚಾಗಿ ವಾಹನ ನೋಂದಣಿಯಾಗುತ್ತಿವೆ. ಈ ವರ್ಷ ಖರೀದಿ ಮಾಡಿ ನೋಂದಣಿ ಮಾಡಿದ ವಾಹನಗಳ ವಿವರ ನೋಡುವುದಾದರೆ, ದ್ವಿಚಕ್ರ ವಾಹನ ಮೇ ತಿಂಗಳಲ್ಲಿ 980, ಜೂನ್ 1033, ಜುಲೈ 1100, ಆಗಸ್ಟ್ 1600, ಸೆಪ್ಟೆಂಬರ್ 1805, ಅಕ್ಟೋಬರ್ 2023 ವಾಹನಗಳು ಆರ್ಟಿಒ ಕಚೇರಿಯಲ್ಲಿ ರಿಜಿಸ್ಟರ್ ಆಗಿವೆ. ಹಾಗೆ ನಾಲ್ಕು ಚಕ್ರದ ವಾಹನಗಳು ಮೇ ತಿಂಗಳಲ್ಲಿ 2428, ಜೂನ್ 3140, ಜುಲೈ 3600, ಆಗಸ್ಟ್ 4000, ಸೆಪ್ಟೆಂಬರ್ 3899 ಹಾಗೂ ಅಕ್ಟೋಬರ್ನಲ್ಲಿ 4800 ವಾಹನಗಳು ರಿಜಿಸ್ಟರ್ ಆಗಿವೆ.