ಕರ್ನಾಟಕ

karnataka

ETV Bharat / state

ನಾನೂ ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಆದ್ರೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಸಾಫ್ಟ್ ಆದ ಮಹೇಶ್ ಕುಮಟಳ್ಳಿ

ಅಥಣಿ ಕ್ಷೇತ್ರದ ಟಿಕೆಟ್ ಬೇಕು ಅಂತಾ ಪಟ್ಟು ಹಿಡಿದಿದ್ದ ಶಾಸಕ ಕುಮಟಳ್ಳಿ ಈ ವಿಷಯದಲ್ಲೀಗ ಈಗ ಸಾಫ್ಟ್​ ಆದಂತೆ ಮಾತನಾಡಿದ್ದಾರೆ. ಟಿಕೆಟ್​ ವಿಚಾರದಲ್ಲಿ ಹೈಕಮಾಂಡ್​ ನಿರ್ಧಾರಕ್ಕೆ ಬದ್ಧ ಅಂದಿದ್ದಾರೆ.

bjp
ಶಾಸಕ ಮಹೇಶ್ ಕುಮಟಳ್ಳಿ

By

Published : Apr 6, 2023, 1:04 PM IST

ಟಿಕೆಟ್​ ವಿಚಾರ ಕುರಿತು ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ

ಬೆಂಗಳೂರು:ಅಥಣಿ ವಿಧಾನಸಭಾ ಕ್ಷೇತ್ರದ ಟಿಕೆಟ್​ಗೆ ಬಿಗಿ ಪಟ್ಟು ಹಿಡಿದಿದ್ದ ಶಾಸಕ ಮಹೇಶ್ ಕುಮಟಳ್ಳಿ ಜೊತೆಗೆ ರಾಜ್ಯ ನಾಯಕರು ಸಂಧಾನ ನಡೆಸಿದ್ದು ಟಿಕೆಟ್ ವಿಚಾರದಲ್ಲಿ ಇದೀಗ ಕುಮಟಳ್ಳಿ ಮೃದು ಧೋರಣೆ ತಳೆದಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದ್ದಾರೆ. ಆ ಮೂಲಕ ಬೆಳಗಾವಿ ಪಾಲಿಟಿಕ್ಸ್​ನಲ್ಲಿ ತಲೆದೂರಿದ್ದ ದೊಡ್ಡ ಸಮಸ್ಯೆ ಪರಿಹಾರಗೊಂಡಂತಾಗಿದೆ.

ಮಲ್ಲೇಶ್ವರಂಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಶಾಸಕ ಮಹೇಶ್ ಕುಮಟಳ್ಳಿ ಭೇಟಿ ನೀಡಿದರು. ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಮಾತುಕತೆ ನಡೆಸಿದರು. ಟಿಕೆಟ್ ವಿಷಯದಲ್ಲಿ ಚರ್ಚೆ ನಡೆಸಿದರು. ರಾಜ್ಯದ ನಾಯಕರು ನಿಮ್ಮ ಹೆಸರನ್ನೂ ಪಟ್ಟಿಯಲ್ಲಿ ಸೇರಿಸಿ ಕಳಿಸಲಾಗುತ್ತದೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಟಿಕೆಟ್ ಕೈತಪ್ಪಿದರೆ ಪರಿಷತ್ ಸದಸ್ಯ ಸ್ಥಾನದ ಭರವಸೆ ನೀಡಿದ್ದಾರೆ ಇದಕ್ಕೆ ಕುಮಟಳ್ಳಿ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ನಾಯಕರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್ ಕುಮಟಳ್ಳಿ, ನಾನು ಈ ಚುನಾವಣೆಯಲ್ಲಿ ವಿಧಾನಸಭೆ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ ಅಂತಿಮವಾಗಿ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ, ಇನ್ನು ಎರಡು ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಆಗಲಿದೆ. ಆದರೆ ಅಂತಿಮವಾಗಿ ವರಿಷ್ಠರು ಯಾವುದೇ ತೀರ್ಮಾನ ಮಾಡಿದರೂ ಅದಕ್ಕೆ ನಾನು ಬದ್ಧನಿರುತ್ತೇನೆ ಎಂದರು. ಆ ಮೂಲಕ ಮೊದಲ ಬಾರಿ ಸಾಫ್ಟ್ ನಿಲುವು ವ್ಯಕ್ತಪಡಿಸಿದರು. ಈಗಾಗಲೇ ನಮ್ಮ ಕ್ಷೇತ್ರಕ್ಕೆ ಒಂದು ಎಂಎಲ್ಸಿ ಮತ್ತೊಂದು ಎಂಎಲ್ಎ ಟಿಕೆಟ್ ಕೊಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ ಎನ್ನುವ ಮೂಲಕ ಈಗ ಟಿಕೆಟ್ ತಪ್ಪಿದರೆ ಎಂಎಲ್ಸಿ ಸ್ಥಾನ ನೀಡುವ ಕುರಿತು ನಾಯಕರು ಭರವಸೆ ನೀಡಿರುವ ವಿಚಾರವನ್ನು ಬಹಿರಂಗಪಡಿಸಿದರು.

ಅಥಣಿ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಕಗ್ಗಂಟಾಗಿದ್ದು ಕುಮಟಳ್ಳಿಗೆ ಟಿಕೆಟ್ ನೀಡಿದಿದ್ದಲ್ಲಿ ನಾನು ಸ್ಪರ್ಧೆ ಮಾಡಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದರು. ಇದು ರಾಜ್ಯ ಬಿಜೆಪಿ ನಾಯಕರಿಗೆ ಹೊಸ ತಲೆನೋವಾಗಿ ಪರಿಣಮಿಸಿತ್ತು. ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬೆಳಗಾವಿಯಲ್ಲಿ ಸಂಧಾನ ಸಭೆ ನಡೆಸಿದ್ದರು. ಟಿಕೆಟ್ ಆಕಾಂಕ್ಷಿಗಳಾಗಿರುವ ಮಹೇಶ್ ಕುಮಟಳ್ಳಿ, ಲಕ್ಷ್ಮಣ್ ಸವದಿ ಹಾಗು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಸಭೆ ನಡೆಸಿ ಕಗ್ಗಂಟು ಪರಿಹರಿಸುವ ಪ್ರಯತ್ನ ನಡೆಸಿದ್ದರು. ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ಇಬ್ಬರೂ ಬದ್ಧರಿರಬೇಕು ಯಾರಿಗೆ ಟಿಕೆಟ್ ಕೈತಪ್ಪಲಿದೆಯೋ ಅವರಿಗೆ ಪರಿಷತ್ ಸದಸ್ಯರನ್ನಾಗಿ ಮಾಡುವ ಸಂಧಾನ ಸೂತ್ರ ಪ್ರಕಟಿಸಿದ್ದು, ಇದಕ್ಕೆ ಎಲ್ಲರೂ ಸಮ್ಮತಿಸಿದ್ದಾರೆ. ಹೀಗಾಗಿ ಕುಮಟಳ್ಳಿ ಮೃದು ಧೋರಣೆ ತಳೆದಿದ್ದಾರೆ.

ಮಹೇಶ್ ಕುಮಟಳ್ಳಿ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಶಾಸಕರಾಗಿ ಉಪಚುನಾವಣೆಯಲ್ಲಿ ಮರು ಆಯ್ಕೆಯಾಗಿದ್ದರು. ಆದರೆ ಸರ್ಕಾರ ರಚಿಸಲು ಕಾರಣರಾದರೂ ಸಚಿವ ಸ್ಥಾನದಿಂದ ವಂಚಿತರಾಗಿದ್ದರು. ಹಾಗಾಗಿ ಈಗ ಟಿಕೆಟ್​ನಿಂದಲೂ ವಂಚಿತರನ್ನಾಗಿ ಮಾಡಿ ಮತ್ತೊಮ್ಮೆ ಅನ್ಯಾಯ ಮಾಡಬಾರದು ಎನ್ನುವುದು ರಮೇಶ್ ಜಾರಕಿಹೊಳಿ ಬೇಡಿಕೆಯಾಗಿತ್ತು. ಹಾಗಾಗಿ ಟಿಕೆಟ್ ಆಯ್ಕೆ ಕಗ್ಗಂಟಾಗಿತ್ತು.

ಇದನ್ನೂ ಓದಿ:ಕಾಂಗ್ರೆಸ್​ನಿಂದ​ 42​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.. ಯಾವ ಕ್ಷೇತ್ರಕ್ಕೆ ಯಾರು ನೋಡಿ

ABOUT THE AUTHOR

...view details