ಬೆಂಗಳೂರು: 15ನೇ ವಿಧಾನಸಭೆ ಅಧಿವೇಶನದ ಕೊನೆ ದಿನವಾದ ಇಂದು ಸದಸ್ಯರು ವಿದಾಯ ಭಾಷಣ ಮಾಡಿದರು. ಪ್ರಶ್ನೋತ್ತರ ಕಲಾಪದ ವೇಳೆ ಬಹುತೇಕ ಸದಸ್ಯರು ಗೈರಾಗಿದ್ದರು. ಹಾಗಾಗಿ, ಪ್ರಶ್ನೋತ್ತರ ಅವಧಿ ಒಂದು ಪ್ರಶ್ನೆಗೆ ಸೀಮಿತವಾಗಿತ್ತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೊನೆ ಅಧಿವೇಶನವಾಗಿರುವ ಕಾರಣ ಎಲ್ಲಾ ಶಾಸಕರುಗಳಿಗೆ ತಮ್ಮ ಮನದಾಳದ ಮಾತುಗಳನ್ನು ಸದನದಲ್ಲಿ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟರು.
'ಗೆದ್ದು ಮತ್ತೆ ಬರೋಣ': ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಅರವಿಂದ ಲಿಂಬಾವಳಿ, ಬಸನಗೌಡ ಪಾಟೀಲ್ ಯತ್ನಾಳ್, ಪ್ರತಿಪಕ್ಷದ ಉಪ ನಾಯಕ ಯು.ಟಿ.ಖಾದರ್, ಜೆಡಿಎಸ್ನ ಉಪನಾಯಕ ಬಂಡೆಪ್ಪ ಕಾಶೆಂಪೂರ್, ಸಾ.ರಾ.ಮಹೇಶ್ ಸೇರಿದಂತೆ ಆಡಳಿತ ಹಾಗೂ ಪ್ರತಿಪಕ್ಷಗಳ ಹಲವಾರು ಸದಸ್ಯರು, ತಮ್ಮ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಪರಸ್ಪರ ಅಭಿನಂದನೆ, ಕೃತಜ್ಞತೆ ವಿನಿಮಯ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ಗೆದ್ದು ಮತ್ತೆ ಸದನಕ್ಕೆ ಬರೋಣವೆಂದು ಶುಭ ಹಾರೈಸಿದರು.
'ಆವೇಶದ ಮಾತು, ವೈಯಕ್ತಿಕವಲ್ಲ': ಕಳೆದ ಐದು ವರ್ಷಗಳ ಕಾಲ ಶಾಸಕರಾಗಿ ಸದನದಲ್ಲಿ ಏನೇ ಪ್ರಸ್ತಾಪ ಮಾಡಿದ್ದರೂ ಜನರ ಹಿತಕ್ಕಾಗಿ ಎಲ್ಲವನ್ನೂ ಮಾಡಿದ್ದೇವೆ. ಕೇವಲ ರಾಜ್ಯದ ಅಭಿವೃದ್ಧಿ ಹಾಗೂ ಜನರ ಬದುಕಿಗೆ ಒಳ್ಳೆಯದನ್ನು ಮಾಡುವ ಉದ್ದೇಶದಿಂದ ನಾವು ಕೆಲವೊಮ್ಮೆ ಸಿಟ್ಟು ಆವೇಶದಿಂದ ಕೆಲವು ಮಾತುಗಳನ್ನು ಆಡಿದ್ದೇವೆ, ಅವು ವೈಯಕ್ತಿಕವಾಗಿ ಇಲ್ಲ. ನಾವೆಲ್ಲಾ ವೈಯಕ್ತಿಕವಾಗಿ ಸ್ನೇಹಿತರು. ಯಾವುದೇ ಕಹಿ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ. ಎಲ್ಲೇ ಸಿಕ್ಕರೂ ಉಭಯ ಕುಶಲೋಪರಿ ಇದ್ದೇ ಇರುತ್ತದೆ ಎಂಬ ಭಾವನೆಯೊಂದಿಗೆ ಎಲ್ಲ ಸದಸ್ಯರು ವಿದಾಯ ನುಡಿಗಳನ್ನಾಡಿದರು.
ಮಹನೀಯರ ಸ್ಮರಿಸಿದ ಸಿಎಂ:ಸ್ವಾತಂತ್ರ್ಯ ಹೋರಾಟ, ರಾಜ್ಯದ ಏಕೀಕರಣ ಚಳವಳಿ ಈ ಎಲ್ಲಾ ಹೋರಾಟಗಳಿಂದಲೇ ಪ್ರಜಾಪ್ರಭುತ್ವ ದೇಶದಲ್ಲಿ ಗಟ್ಟಿಗೊಂಡಿತು. ದೇಶದ ಅಭಿವೃದ್ಧಿಗೆ ಗಾಂಧೀಜಿ, ನೆಹರು, ಡಾ.ಅಂಬೇಡ್ಕರ್, ಕುವೆಂಪು ಸೇರಿದಂತೆ ಹಲವಾರು ಮಹನೀಯರು ಗಟ್ಟಿ ಅಡಿಪಾಯ ಹಾಕಿಕೊಟ್ಟರು. ಕರ್ನಾಟಕ ಏಕೀಕರಣದ ಮೂಲಕ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಸಾಹುಕಾರ್ ಚೆನ್ನಯ್ಯ, ಅಂದಾನಪ್ಪ ಮೇಟಿ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಎಲ್ಲರ ಕೊಡುಗೆಗಳನ್ನು ನೆನಪು ಮಾಡಿಕೊಂಡರು.