ಬೆಂಗಳೂರು: ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರ ಬದ್ಧವಾಗಿದೆ. ಆ ಕೆಲಸವನ್ನು ನಾವು ಮಾಡ್ತಾ ಇದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಕಾಂಗ್ರೆಸ್ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ 2006ರಲ್ಲಿ ಪ್ರಾರಂಭವಾಗಿದೆ. 2,815 ಎಚ್ಪಿ ಸಾಮರ್ಥ್ಯದ ಒಟ್ಟು 8 ಪಂಪ್ ಸೆಟ್ಗಳನ್ನ ಹಾಕಿದ್ದೇವೆ. ಅದರಲ್ಲಿ 5 ಪಂಪ್ಗಳು 2015/16 ರಲ್ಲಿಯೇ ರಿಪೇರಿಗೆ ಬಂದಿದ್ದವು. 7.75 ಕೋಟಿ ರೂ. ಖರ್ಚು ಮಾಡಿ 7 ಪಂಪ್ಗಳನ್ನ ರಿಪೇರಿ ಮಾಡಲಾಗಿದ್ದು, 5 ವರ್ಷ ಅದೇ ಕಂಪನಿಗಳಿಗೆ ನಿರ್ವಹಣೆಗೆ ನೀಡಿದ್ದೇವೆ.
ಈಗಾಗಲೇ 4 ಪಂಪ್ಗಳ ಕಾರ್ಯಾರಂಭಿಸಿದ್ದು, 2 ಪಂಪ್ಗಳ ರಿಪೇರಿ ಈ ತಿಂಗಳಲ್ಲೇ ಮುಗಿಯುತ್ತದೆ. ಒಟ್ಟಾರೆ 7 ಪಂಪ್ಗಳು ಕಾರ್ಯ ಶುರು ಮಾಡುತ್ತವೆ ಎಂದರು. ಇನ್ನು, 147 ಕಿಮೀವರೆಗೂ ರೈತರು ನೀರು ಬಿಡ್ಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಅದಕ್ಕೆ ತಾಂತ್ರಿಕ ಸಮಸ್ಯೆಗಳಿದ್ದು, 97 ಕಿಮೀರವರೆಗೂ ನೀರು ಕೊಡ್ತಾ ಇದೀವಿ, 42 ಸಾವಿರ ಹೆಕ್ಟೇರ್ನಷ್ಟು ನೀರಾವರಿ ಮಾಡಿಕೊಡುತ್ತೇವೆ. ಕುಡಿಯುವ ನೀರಿಗಾಗಿಯೇ ಕೊಡ್ತಾ ಇದೀವಿ. ಇದಕ್ಕಾಗಿ ಸ್ಕಾಡಾ ಗೇಟ್ ಅಳವಡಿಸಬೇಕು ಅದನ್ನ ಆಲೋಚನೆ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ರೇವಣ್ಣ ಸಿದ್ದೇಶ್ವರ ಏತನೀರಾವರಿ ಯೋಜನೆ ಕುರಿತು ಪ್ರತಿಕ್ರಿಸಿದ ಅವರು ರೇವಣ್ಣ ಸಿದ್ದೇಶ್ವರ ಯೋಜನೆ ಸಣ್ಣ ಪ್ರಾಜೆಕ್ಟ್ ಅಲ್ಲ ಅದು 3,000 ಕೋಟಿ ರೂ. ಮೌಲ್ಯದ ಯೋಜನೆ. ಈ ಹಿಂದೆ ಬೊಮ್ಮಾಯಿ ಅವರು ಐದು ವರ್ಷಗಳ ಹಿಂದೆ ನೀರಾವರಿ ಇಲಾಖೆಯ ಮಂತ್ರಿಯಾಗಿದ್ದಾಗಲೂ ಅದೇ ಬೇಡಿಕೆ ಇತ್ತು.
ಆದರೆ, ಯಾರು ಮಾಡಿರಲಿಲ್ಲ. ಸಿಎಂ 3,000 ಕೋಟಿ ರೂ. ಯೋಜನೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಈಗಾಗಲೇ ಮೊದಲನೇ ಹಂತದ ಕಾಮಗಾರಿಗೆ 770 ಕೋಟಿ ರೂಪಾಯಿಗೆ ಅನುಮೋದನೆ ನೀಡಿ ಟೆಂಡರ್ ಪ್ರಕ್ರಿಯೆ ಶುರುವಾಗಿದೆ. ಎರಡನೇ ಹಂತದ ಕಾಮಗಾರಿಗೂ ಶೀಘ್ರದಲ್ಲಿ ಟೆಂಡರ್ ಕರೆಯುತ್ತೇವೆ ಎಂದು ಹೇಳಿದರು.
ರೇವಣ್ಣ ಸಿದ್ದೇಶ್ವರ ಏತನೀರಾವರಿ ಯೋಜನೆಯಿಂದ ಒಂದು ಹುಲ್ಲು ಕಡ್ಡಿ ಬೆಳೆಯದ ವಿಜಯಪುರ ಜಿಲ್ಲೆಯ 57 ಹಳ್ಳಿಗಳಿಗೆ ನೀರಾವರಿಯಾಗುತ್ತದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಕಡಿಮೆಗೊಳ್ಳಲಿದೆ. 5 ವರ್ಷ ನಿಮ್ಮ ಹತ್ತಿರ ಸರ್ಕಾರ ಇದ್ದರು ನೀವು ಏನು ಮಾಡ್ಲಿಲ್ಲ, ಕಳಕಳಿ ಕಾಳಜಿಯಿಂದ ನಮ್ಮ ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು.
ಕಾರಂಜಾ ಕಾಲುವೆಯ ಮರುನವೀಕರಣ:ಕಾರಂಜಾ ಏತನೀರಾವರಿ ಯೋಜನೆಯ ಕಾಲುವೆಯ ಆಧುನೀಕರಣ ಆಗದೇ ಇರುವುದರಿಂದ ರೈತರ ಹೊಲದಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿದೆ ಎಂದು ಶಾಸಕ ಬಂಡೇಪ್ಪ ಕಾಶೆಂಪೂರ್ ಅವರ ಪರವಾಗಿ ಶಾಸಕ ವೆಂಕಟರಾವ್ ನಾಡಗೌಡ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿ, 21 ಕಿಲೋ ಮೀಟರ್ ಮುಖ್ಯ ಕಾಲುವೆಗೆ 1993 - 94 ರಲ್ಲಿ ಶಭಾದ್ ಸ್ಟೋನ್ಗಳನ್ನು ಹಾಕಿದ್ದರು. ಹೀಗಾಗಿ ನೀರು ಸರಿಯಾಗಿ ಹೋಗ್ತಾ ಇರ್ಲಿಲ್ಲ. ಒಟ್ಟು 45 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ಈಗಾಗಲೇ 32.5 ಕೋಟಿ ರೂ. ಖರ್ಚು ಮಾಡಲಾಗಿದೆ. ಕೆಲ ತಿಂಗಳಲ್ಲಿ ಬಾಕಿ ಉಳಿದಿರುವುದನ್ನು ಮರುನವೀಕರಣ ಮಾಡಿಸುತ್ತೇವೆ ಎಂದು ಹೇಳಿದರು.