ಬೆಂಗಳೂರು:ಚುನಾವಣೆ ಸಂದರ್ಭ ಬಂದಾಗ ರಾಜಕಾರಣಿಗಳು ಮತದಾರರಿಗೆ ಹಲವು ರೀತಿ ಆಮಿಷ ಒಡ್ಡುವುದು ಸಾಮಾನ್ಯ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ನಾನಾ ರೀತಿಯ ಆಮಿಷಗಳನ್ನು ಒಡ್ಡಲಾಗುತ್ತಿದೆ. ಇದರ ಜೊತೆಗೆ ರಾಜಕಾರಣಿಗಳು ಮತ್ತು ಟಿಕೆಟ್ ಆಕಾಂಕ್ಷಿಗಳು ಜ್ಯೋತಿಷಿಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿ, ಅವರಿಗೂ ಬೇಡಿಕೆ ಹೆಚ್ಚಿದೆ. ಇಷ್ಟೇ ಅಲ್ಲದೆ, ಹಲವು ರೀತಿಯ ಪೂಜೆ, ಹೋಮ-ಹವನವೂ ನಡೆಯುತ್ತಿದೆ. ಹಳ್ಳಿ, ಹಳ್ಳಿಗಳಲ್ಲೂ ರಾಜಕಾರಣಿಗಳು ದೇವಸ್ಥಾನಗಳಿಗೆ ಎಡತಾಕುವುದು ಸಾಮಾನ್ಯವಾಗಿದೆ.
ದೇವಾಲಯಗಳಿಗೆ ಭೇಟಿ ನೀಡಿ, ಆಯಾ ಸಮುದಾಯಗಳ ಮತ ಸೆಳೆಯುವ ತಂತ್ರದ ಭಾಗವಾಗಿ ರಾಜಕೀಯ ನಾಯಕರು ಹೋದ ಕಡೆಯಲ್ಲಿ ದೇವರಿಗೆ ಕೈಮುಗಿಯುವುದು ಹೆಚ್ಚು ಕಂಡುಬರುತ್ತಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಜ್ಯೋತಿಷಿಗಳಿಗೂ ಬೇಡಿಕೆ ಹೆಚ್ಚಿದೆ ಎಂತಲೇ ಹೇಳಬಹುದು. ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವುದನ್ನು ಹೊರತುಪಡಿಸಿದರೆ ಕಾಂಗ್ರೆಸ್ ಹಾಗೂ ಬಿಜೆಪಿ ಇನ್ನೂ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.
ಹಾಗಾಗಿ, ಟಿಕೆಟ್ ಸಿಗುತ್ತದೋ, ಇಲ್ಲವೋ ಎಂಬುದರ ಬಗ್ಗೆ ಅನುಮಾನವಿದ್ದು, ಅದರ ಬಗ್ಗೆ ಕೇಳಲು ಟಿಕೆಟ್ ಆಕಾಂಕ್ಷಿಗಳು ಜ್ಯೋತಿಷಿಗಳ ಮೊರೆ ಹೋಗುತ್ತಿದ್ದಾರೆ. ರಾಶಿ ಫಲ, ಯಾವ ದೇವರ ಪೂಜೆ ಮಾಡಿಸಬೇಕು. ಮತದಾರರಿಗೆ ಗಿಫ್ಟ್ ಯಾವ ಸಂದರ್ಭದಲ್ಲಿ ನೀಡಬೇಕು. ಮತದಾರರ ಭೇಟಿಗೆ ಹೋಗುವ ವೇಳೆ ಯಾವ ಬಣ್ಣದ ಬಟ್ಟೆ ಧರಿಸಬೇಕು. ಮನೆಯಿಂದ ಹೊರಡುವಾಗ ಯಾವ ದಿಕ್ಕಿನಿಂದ ಪ್ರಮಾಣ ಮಾಡಬೇಕು ಎಂಬುದನ್ನೂ ಕೇಳುವವರು ಇದ್ದಾರೆ. ಹಾಗಾಗಿ, ಜ್ಯೋತಿಷಿಗಳಿಗೆ ಬೇಡಿಕೆ ಹೆಚ್ಚಿದೆ.
ಹೋಮ, ಹವನವೂ ಹೆಚ್ಚು: ತಮ್ಮ ಗೆಲುವಿನ ದಾರಿ ಸುಗಮವಾಗಲಿ ಎಂದು ಸುದರ್ಶನ ಹೋಮ, ಪ್ರತ್ಯಂಗೀರಾ ಹೋಮ, ಶನೇಶ್ವರನ ಜಪ ಹೀಗೆ ಹಲವು ಬಗೆಯ ಪೂಜೆ-ಹೋಮಗಳನ್ನು ಮಾಡಿಸಲಾಗುತ್ತದೆ. ಇದರ ಜೊತೆಗೆ ವಿವಿಧ ದೇವಸ್ಥಾನ-ಮಠಗಳಿಗೆ ಭೇಟಿ ಕೊಡುವುದು, ಮನೆದೇವರ ಪೂಜೆ ಮಾಡುವುದು ಕೂಡ ನಡೆಯುತ್ತದೆ. ಇನ್ನು ಚುನಾವಣೆ ಸಮೀಪ ಬಂದಾಗ, ಚುನಾವಣೆಯನ್ನು ಎದುರಿಸಲು ರಾಜಕೀಯ ನಾಯಕರು ಪ್ರತ್ಯಂಗಿರಾ ಹೋಮ ಹವನ ಮೊರೆ ಹೋಗುವುದು ಸಾಮಾನ್ಯ. ರಾಜಕೀಯ ಜೀವನದಲ್ಲಿ ಅಡ್ಡಿಯಾಗುವ ಶತ್ರುಗಳನ್ನು ಸಂಹಾರ ಮಾಡಿಸಲು ಈ ಪ್ರತ್ಯಂಗಿರಾ ಹೋಮ ಮಾಡಿಸಲಾಗುತ್ತದೆ. ಚುನಾವಣೆಯ ಗಿಲುವಿನ ಹಿನ್ನೆಲೆಯಲ್ಲಿ ಈ ಹೋಮವನ್ನು ಬಹುತೇಕರು ಯಾರಿಗೂ ತಿಳಿಯದಂತೆ ಮಾಡಿಸುತ್ತಾರೆ. ಇದು ಹೊರಗೆ ಗೊತ್ತಾಗುವುದೇ ಇಲ್ಲ ಎನ್ನುತ್ತಾರೆ ಅರ್ಚಕರೊಬ್ಬರು.
ಅಭ್ಯರ್ಥಿಗಳು ಪಕ್ಷಗಳಿಂದ ತಾವು ಪಡೆದುಕೊಳ್ಳುವ ಬಿ ಫಾರಂ ಅನ್ನು ದೇವಸ್ಥಾನಗಳಿಗೆ ತೆಗೆದುಕೊಂಡು ಹೊಗಿ ಪೂಜೆ ನೆರವೇರಿಸುತ್ತಾರೆ. ಬಳಿಕ ನಾಮಪತ್ರ ಸಲ್ಲಿಸಲು ಜ್ಯೋತಿಷಿಗಳ ಬಳಿ ಸಮಯ ಕೇಳುತ್ತಾರೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಪಕ್ಷಗಳು ಜ್ಯೋತಿಷಿಗಳ ಮೊರೆ ಹೋಗುತ್ತವೆ. ಎಷ್ಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕು? ಯಾವ ದಿನಾಂಕ, ಸಮಯದಲ್ಲಿ ಮಾಡಬೇಕು ಎಂಬುದನ್ನು ಕೇಳಿಯೇ ಪಟ್ಟಿ ಪ್ರಕಟಿಸುವ ಪದ್ಧತಿ ಬಹುತೇಕ ಎಲ್ಲ ಪಕ್ಷಗಳಲ್ಲೂ ಇದೆ.