ಬೆಂಗಳೂರು : ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮತದಾನಕ್ಕೆ ಚುನಾವಣಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8,802 ಮತಗಟ್ಟೆಗಳಿಗೆ ತೆರಳಲು ಸಿಬ್ಬಂದಿ ತಯಾರಾಗಿದ್ದು, ನಗರದಲ್ಲಿ 42 ಸಾವಿರ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ.
ಬೆಳಗ್ಗೆಯಿಂದಲೇ ಚುನಾವಣೆ ತಯಾರಿ ನಡೆಯುತ್ತಿದ್ದು, ಮಸ್ಟರಿಂಗ್ ಸೆಂಟರ್ನಲ್ಲಿ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ. ನಿಯೋಜಿತ ಸಿಬ್ಬಂದಿ ಆಯಾ ಮಸ್ಟರಿಂಗ್ ಸೆಂಟರ್ ಗಳಲ್ಲಿ ಇವಿಎಂ ಪಡೆದು ಇಂದು ಸಂಜೆ ವೇಳೆಗೆ ಮತಗಟ್ಟೆಗಳಿಗೆ ತೆರಳುತ್ತಾರೆ. ಈಗಾಗಲೇ ಮಸ್ಟರಿಂಗ್ ಸೆಂಟರ್ಗಳಲ್ಲಿ ಬಸ್ಗಳು ಸಿದ್ದವಾಗಿ ನಿಂತಿದ್ದು, ಒಂದು ಬಸ್ನಲ್ಲಿ ಐದರಿಂದ ಆರು ಮತಗಟ್ಟೆಗಳಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ಡ್ರಾಪ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ನಾಳೆ ಬಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ.
ಇವಿಎಂಗಳಲ್ಲಿ ದೋಷ ಕಂಡು ಬಂದರೆ ತಕ್ಷಣವೇ ಸರಿಪಡಿಸಲು ಸೆಕ್ಟರ್ ಆಫೀಸರ್ ಗಳನ್ನು ನಿಯೋಜನೆ ಮಾಡಲಾಗಿದೆ. ಮೂವತ್ತು ನಿಮಿಷಗಳ ಸರಿ ಮಾಡುವಂತಹ ಕೆಲಸ ಮಾಡಲಾಗುವುದು ಎಂದು ಬೆಂಗಳೂರು ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಕ್ಯೂ ಆ್ಯಪ್ ಮೂಲಕ ಮತದಾನಕ್ಕೆ ಸಮಯ ನಿಗದಿ ಪಡಿಸಿಕೊಳ್ಳಬಹುದು. ಸುಮಾರು 600 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ 15 ರಿಂದ 20 ನಿಮಿಷಕ್ಕೆ ಕ್ಯೂ ಆ್ಯಪ್ ಅಪ್ ಡೇಟ್ ಆಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಮಹಿಳಾ ಮಾದರಿ ಮತಗಟ್ಟೆಗಳಿವೆ. ಅದೇ ರೀತಿ ಥೀಮ್ ಬೇಸ್ಡ್ ಮತಗಟ್ಟೆಗಳನ್ನು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪಿಂಕ್ ಬೂತ್ ಸ್ಥಾಪನೆ :ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಪಿಂಕ್ ಬೂತ್ ನಂತೆ ಒಟ್ಟು ಮಹಾನಗರ ವ್ಯಾಪ್ತಿಯಲ್ಲಿ 140 ಪಿಂಕ್ ಬೂತ್ ಗಳನ್ನು ಸ್ಥಾಪನೆ ಮಾಡಲಾಗಿದೆ. ಮಹಿಳೆಯರು ಹೆಚ್ಚಾಗಿರುವ ವಾರ್ಡ್ಗಳಲ್ಲಿ ಪಿಂಕ್ ಬೂತ್ ಗಳನ್ನು ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಮಸ್ಟರಿಂಗ್ ಕಾರ್ಯ ಆರಂಭವಾಗಿದ್ದು, ಮಸ್ಟರಿಂಗ್ ಸೆಂಟರ್ ಗಳಲ್ಲೇ ಇವಿಎಂ ಗಳನ್ನು ಸ್ಟ್ರಾಂಗ್ ರೂಂನಲ್ಲಿ ಬಿಗಿ ಭದ್ರತೆಯೊಂದಿಗೆ ಇರಿಸಲಾಗಿದೆ.