ಕರ್ನಾಟಕ

karnataka

ETV Bharat / state

ಬಿಜೆಪಿ ಪರ ಅಲೆ ಸೃಷ್ಟಿಸಲು ಕಸರತ್ತು: ಮೋದಿ, ಶಾ, ನಡ್ಡಾ, ಯೋಗಿ ತಂಡದಿಂದ ಪ್ರಚಾರಕ್ಕೆ ಪ್ಲಾನ್ - ಬಿಜೆಪಿ ಪರ ಅಲೆ

ವಿಧಾನಸಭೆ ಚುನಾವಣೆ 2023ರ ಗೆಲುವಿಗಾಗಿ ಜಟಾಪಟಿ ಪ್ರಾರಂಭವಾಗಿದೆ. ಪ್ರತಿಪಕ್ಷಗಳಿಗೆ ಕೌಂಟರ್ ನೀಡಲು ಆಡಳಿತ ಪಕ್ಷ ಬಿಜೆಪಿ ಮಾಸ್ಟರ್ ಪ್ಲಾನ್​ ರೂಪಿಸಿದೆ. ಇದಕ್ಕಾಗಿ ಕೇಂದ್ರ ನಾಯಕರನ್ನು ಕರೆತಂದು ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಲು ಮುಂದಾಗಿದೆ.

bjp
ಬಿಜೆಪಿ

By

Published : Jan 29, 2023, 9:07 AM IST

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಡುವಿಲ್ಲದೆ ನಡೆಸುತ್ತಿರುವ ಅಬ್ಬರದ ಚುನಾವಣಾ ಯಾತ್ರೆಗಳಿಗೆ ಕೌಂಟರ್ ಕೊಡಲು ಇದೀಗ ಆಡಳಿತ ಪಕ್ಷ ಬಿಜೆಪಿ ದೊಡ್ಡ ಯೋಜನೆ ರೂಪಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಶಕ್ತಿ ಹೊಂದಿರುವ ಬಿಜೆಪಿಯ ರಾಷ್ಟ್ರೀಯ ಮಟ್ಟದ ಸ್ಟಾರ್ ನಾಯಕರಿಂದ ಚುನಾವಣಾ ರ‍್ಯಾಲಿ ಮತ್ತು ಸಮಾವೇಶಗಳನ್ನು ನಡೆಸಿ ಮತದಾರರ ಮನ ಗೆಲ್ಲಲು ಪಕ್ಷ ವೇದಿಕೆ ಸಿದ್ಧಪಡಿಸಿದೆ.

ಮತದಾರರ ಮತದೊಂದಿಗೆ ಮನ ಪರಿವರ್ತನೆ ಮಾಡುವಂತಹ ಸಾಮರ್ಥ್ಯ ಹೊಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ಹಿಂದುತ್ವದ ಫೈರ್ ಬ್ರಾಂಡ್ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಮೇಲಿಂದ ಮೇಲೆ ಕರ್ನಾಟಕಕ್ಕೆ ಕರೆಯಿಸಿ ಚುನಾವಣಾ ಸಮಾವೇಶಗಳನ್ನು ಆಯೋಜಿಸಿ, ಮತದಾರರನ್ನು ಸೆಳೆಯಲು ಭಾರತೀಯ ಜನತಾ ಪಕ್ಷ ಕಾರ್ಯತಂತ್ರ ಮಾಡುತ್ತಿದೆ.

ಇದರ ಭಾಗವಾಗಿ ರಾಜ್ಯಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಜೆ.ಪಿ.ನಡ್ಡಾ ಭೇಟಿ ನೀಡುವ ಕಾರ್ಯಕ್ರಮವನ್ನು ಬಿಜೆಪಿ ಸಿದ್ಧಪಡಿಸಿದೆ. ಮೋದಿ, ಅಮಿತ್ ಶಾ ಮತ್ತು ನಡ್ಡಾ ಜನವರಿ ತಿಂಗಳೊಂದರಲ್ಲಿಯೇ ತಲಾ ಎರಡೆರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ಕೇವಲ ಒಂದು ವಾರದ ಅಂತರದಲ್ಲಿ ಎರಡು ಬಾರಿ (ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ) ಭೇಟಿ ನೀಡಿ, ಬೃಹತ್ ಚುನಾವಣಾ ರ‍್ಯಾಲಿಗಳನ್ನು ನಡೆಸಿ, ಚುನಾವಣಾ ಕಹಳೆ ಮೊಳಗಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನೆಗಾಗಿ ಆಗಮಿಸಿದ ನರೇಂದ್ರ ಮೋದಿ, ಬೃಹತ್ ಮಟ್ಟದ​ ರೋಡ್ ಶೋ ನಡೆಸುವ ಮೂಲಕ ಒಂದು ರೀತಿಯಲ್ಲಿ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಿ ಮತದಾರರನ್ನು ಆಕರ್ಷಿಸಿದ್ದಾರೆ. ಹುಬ್ಬಳ್ಳಿಗೆ ಭೇಟಿ ನೀಡಿದ ಒಂದು ವಾರದ ಅಂತರದಲ್ಲೇ ಕಲ್ಯಾಣ ಕರ್ನಾಟಕದ ಕಲಬುರಗಿ ಮತ್ತು ಯಾದಗಿರಿಗೆ ಭೇಟಿ ನೀಡಿ, ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಮತ ನೀಡುವಂತೆ ಮನವಿ ಮಾಡಿದ್ದರು.

ಇಷ್ಟೇ ಅಲ್ಲದೇ, ಬರುವ ಫೆಬ್ರವರಿ ತಿಂಗಳಲ್ಲಿಯೂ ಸಹ ಪ್ರಧಾನಿ ನಾಲ್ಕು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿ ಚುನಾವಣಾ ರ‍್ಯಾಲಿ ನಡೆಸುವ ಪ್ರವಾಸ ಪಟ್ಟಿಯನ್ನು ಬಿಜೆಪಿ ರೂಪಿಸಿದೆ. ಫೆಬ್ರವರಿ ಮೊದಲನೇ ವಾರ ಮೋದಿಯವರು ಬೆಂಗಳೂರಿಗೆ ಭೇಟಿ ನೀಡಿ, ವಿದ್ಯುತ್ ಯೋಜನೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ಫೆ. ಎರಡನೇ ವಾರದಲ್ಲಿ ಪ್ರತಿಷ್ಠಿತ ಏರ್ ಶೋಗೆ ಚಾಲನೆ ನೀಡಲು ಬೆಂಗಳೂರಿಗೆ ಆಗಮಿಸುವರು.

ಫೆಬ್ರವರಿ ಮೂರನೇ ವಾರ ಮತ್ತೆ ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡಿ, ಶಿವಮೊಗ್ಗದಲ್ಲಿ ಹೊಸದಾಗಿ ನಿರ್ಮಿಸಲಾದ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ. ಬಳಿಕ ಪ್ರಧಾನಿ ಮತ್ತೆ ರಾಜ್ಯಕ್ಕೆ ಭೇಟಿ ನೀಡಿ ಬೆಂಗಳೂರು ಮೈಸೂರಿನಲ್ಲಿ ನಿರ್ಮಿಸಲಾಗಿರುವ ಪ್ರತಿಷ್ಠಿತ ದಶಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಲೋಕಾರ್ಪಣೆ ಮಾಡಿ, ಅಸಂಖ್ಯಾತ ಮತದಾರರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆಬ್ರವರಿ ಅಂತ್ಯದ ವೇಳೆಗೆ ಸಾಧ್ಯವಾದರೆ ಹುಬ್ಬಳ್ಳಿ - ಧಾರವಾಡಕ್ಕೆ ಭೇಟಿ ನೀಡಿ, ಐಐಟಿಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಂಭವವೂ ಇದೆ.

ಒಂದು ಕಡೆ ಪ್ರಧಾನಿ ಮೋದಿ ಕಾರ್ಯಕ್ರಮವಾದರೆ, ಫೆಬ್ರವರಿಯಲ್ಲಿಯೇ ಕೇಂದ್ರ ಗ್ರಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿಯನ್ನು ಹೆಚ್ಚಿಸುವ ಸಂಬಂಧ ಚುನಾವಣೆ ಸಭೆ, ರೋಡ್ ಶೋ, ಸಮಾವೇಶಗಳನ್ನು ನಡೆಸಲಿದ್ದಾರೆ. ಹಿಂದೂ ಫೈರ್ ಬ್ರಾಂಡ್ ಎಂದೇ ಕರೆಸಿಕೊಳ್ಳುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಫೆಬ್ರವರಿ ತಿಂಗಳಲ್ಲಿ ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬೆಂಗಳೂರಿಗೆ ಆಗಮಿಸುವ ಯೋಗಿ ಆದಿತ್ಯನಾಥ್ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿಯಿಂದ ಹೊಸದಾಗಿ ನಿರ್ಮಿಸಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರವನ್ನು ಸಹ ಯೋಗಿ ಕೈಗೊಳ್ಳಲಿದ್ದಾರೆ.

ಬಿಜೆಪಿಯ ಈ ಹಿರಿಯ ನಾಯಕರ ಅಬ್ಬರದ ಪ್ರಚಾರದ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಅವರನ್ನು ಸಹ ರಾಜ್ಯಕ್ಕೆ ಕರೆಸಿ ಚುನಾವಣಾ ಪ್ರಚಾರವನ್ನು ನಡೆಸಲು ರಾಜ್ಯ ಬಿಜೆಪಿ ಉದ್ದೇಶಿಸಿದೆ. ಜನವರಿ ತಿಂಗಳಲ್ಲಿ ಎರಡು ಮೂರು ಬಾರಿ ಜೆ.ಪಿ.ನಡ್ಡಾ ಅವರು ಕರ್ನಾಟಕಕ್ಕೆ ಭೇಟಿ ನೀಡಿ, ಈಗಾಗಲೇ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ. ಫೆಬ್ರವರಿಯಲ್ಲಿಯೂ ಮತ್ತೆ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ:ಬಿಜೆಪಿ ಗೋಡೆ ಬರಹ ಅಭಿಯಾನಕ್ಕೆ ಅಮಿತ್​ ಶಾ ಚಾಲನೆ.. ರೋಡ್​​ ಶೋನಲ್ಲಿ ಕಾಂಗ್ರೆಸ್​ ಜೆಡಿಎಸ್​ ವಿರುದ್ಧ ವಾಗ್ದಾಳಿ

ಈ ನಾಯಕರನ್ನು ಹೊರತುಪಡಿಸಿ ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಹಾಗೂ ಹಿರಿಯ ಮುಖಂಡರಾದ ರಕ್ಷಣಾ ಸಚಿವ ರಾಜನಾಥ್​ ಸಿಂಗ್ , ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಪ್ರಮುಖ ಸಚಿವರನ್ನ ರಾಜ್ಯಕ್ಕೆ ಕರೆಯಿಸಲು ಪ್ಲಾನ್​ ಮಾಡಲಾಗಿದೆ. ಕೇಂದ್ರ ಸಚಿವರ ಸಾರಥ್ಯದಲ್ಲಿ ನಾಲ್ಕು ಪ್ರತ್ಯೇಕ ಯಾತ್ರೆಗಳನ್ನು ಸಹ ಬಿಜೆಪಿಯು ಬಜೆಟ್ ಅಧಿವೇಶನದ ನಂತರ ನಡೆಸಲು ಉದ್ದೇಶಿಸಿದೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಅಮಿತ್ ಶಾ ರಣತಂತ್ರ: 'ಬಾಸ್ ಸಭೆಗೆ ಗೈರಾಗಲು ಯಾರಿಗಾದ್ರೂ ಧೈರ್ಯ ಇದೆಯಾ?'- ಜಾರಕಿಹೊಳಿ

ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಿ ಯಾತ್ರೆಗಳನ್ನು ನಡೆಸುತ್ತಿರುವುದಕ್ಕೆ ಪ್ರತಿಯಾಗಿ ಬಿಜೆಪಿಯು ಪ್ರಧಾನಿ ಸೇರಿದಂತೆ ಹೈಕಮಾಂಡ್ ಮಟ್ಟದ ಜನಪ್ರಿಯ ಮುಖಂಡರನ್ನು ರಾಜ್ಯಕ್ಕೆ ಅಹ್ವಾನಿಸಿ ಚುನಾವಣಾ ಪ್ರಚಾರ, ಭಾಷಣ ಮಾಡಿಸಿ ಆ ಮೂಲಕ ಹೆಚ್ಚಿನ ಮತಗಳನ್ನು ಪಡೆಯುವ ದೂರ ದೃಷ್ಟಿಯನ್ನು ಇಟ್ಟುಕೊಂಡಿದೆ. ಗುಜರಾತ್, ಉತ್ತರಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಚುನಾವಣಾ ರ‍್ಯಾಲಿಗಳನ್ನು ನಡೆಸಿದ ಪರಿಣಾಮ ಹೆಚ್ಚಿನ ಮತಗಳನ್ನು ಬಿಜೆಪಿ ಪಡೆದಿದ್ದು, ಕರ್ನಾಟಕದಲ್ಲಿಯೂ ಈ ನಾಯಕರುಗಳಿಂದ ರ‍್ಯಾಲಿಗಳನ್ನು ನಡೆಸಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಕಾರ್ಯತಂತ್ರ ಹೊಂದಲಾಗಿದೆ.

ABOUT THE AUTHOR

...view details