ಬೆಂಗಳೂರು: ಆಸ್ಪತ್ರೆಯ ಬಿಲ್ನಲ್ಲಿ ರಿಯಾಯಿತಿ ನೀಡಲಿಲ್ಲವೆಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ವೈದ್ಯರ ಮೇಲೆ ಹಲ್ಲೆ ಮಾಡಿರುವ ಘಟನೆ ಜುಲೈ 3ರಂದು ರಾತ್ರಿ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ಪಣತ್ತೂರಿನಲ್ಲಿ ನಡೆದಿದೆ. ಮದ್ಯ ಸೇವಿಸಿ ಜಗಳವಾಡಿಕೊಂಡು ಆಸ್ಪತ್ರೆಗೆ ಬಂದಿದ್ದ ಹರೀಶ್ ಹಾಗೂ ರಾಜೇಶ್ ಎಂಬುವರು ಹಲ್ಲೆ ಮಾಡಿರುವುದಾಗಿ ವೈದ್ಯ ಬಸವರಾಜು ಎಂಬುವವರು ಮಾರತ್ತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ಪಣತ್ತೂರಿನಲ್ಲಿ ಖಾಸಗಿ ಅಸ್ಪತ್ರೆ ನಡೆಸುತ್ತಿರುವ ಬಸವರಾಜು ಅವರ ಬಳಿ ಜುಲೈ 3ರಂದು ಬಂದಿದ್ದ ಆರೋಪಿಗಳು ಚಿಕಿತ್ಸೆ ನೀಡುವಂತೆ ಕೇಳಿದ್ದರು. ಕುಡಿದು ಗಲಾಟೆ ಮಾಡಿಕೊಂಡಿದ್ದರು. ಬಿಯರ್ ಬಾಟಲಿಯಿಂದ ಕೈಗೆ ಗಾಯ ಮಾಡಿಕೊಂಡು ಬಂದಿದ್ದ ಹರೀಶ್ಗೆ ಡಾಕ್ಟರ್ ಬಸವರಾಜು ಚಿಕಿತ್ಸೆ ನೀಡಿದ್ದರು. ಬಳಿಕ ಬಿಲ್ ಕೌಂಟರ್ನಲ್ಲಿದ್ದ ಸಿಬ್ಬಂದಿ 1300/- ರೂ. ಬಿಲ್ ನೀಡಿದ್ದರು. ಈ ವೇಳೆ ಬಿಲ್ ಜಾಸ್ತಿಯಾಗಿದೆ ಎಂದು ಆರೋಪಿಗಳಿಬ್ಬರೂ ಅಸ್ಪತ್ರೆಯಲ್ಲಿ ಗಲಾಟೆ ಆರಂಭಿಸಿದ್ದರು.
ನಂತರ ಬಸವರಾಜು ಅವರೇ 10% ಡಿಸ್ಕೌಂಡ್ ನೀಡಲು ಬಿಲ್ ಕೌಂಟರ್ ಸಿಬ್ಬಂದಿಗೆ ಸೂಚಿಸಿದ್ದರು. ಇಷ್ಟಾದರೂ ಸಹ ಬಿಲ್ ಹೆಚ್ಚಾಗಿದೆ ಎಂದು ಗಲಾಟೆ ಮಾಡಿದ್ದ ಆರೋಪಿಗಳು ಬಸವರಾಜು ಅವರ ಮೇಲೆ ಹಲ್ಲೆ ಮಾಡಿ, ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಜೊತೆಗೂ ಅನುಚಿತವಾಗಿ ವರ್ತಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳ ಉಪಟಳ ತಾಳಲಾರದ ಆಸ್ಪತ್ರೆ ಸಿಬ್ಬಂದಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದು, ಆಸ್ಪತ್ರೆಗೆ ಬಂದ ಪೊಲೀಸರು ಇಬ್ಬರೂ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.