ಕರ್ನಾಟಕ

karnataka

By ETV Bharat Karnataka Team

Published : Dec 25, 2023, 11:44 AM IST

ETV Bharat / state

ಪ್ರಯಾಣಿಕನ ಮೇಲೆ ಹಲ್ಲೆ: ಕೆಎಸ್ಆರ್​ಟಿಸಿ ಡಿಪೋ ಮ್ಯಾನೇಜರ್, ಭದ್ರತಾ ಸಿಬ್ಬಂದಿ ವಿರುದ್ಧ ಎಫ್ಐಆರ್

FIR against KSRTC depot manager, security guard: ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಕೆಎಸ್ಆರ್​ಟಿಸಿ ಡಿಪೋ ಮ್ಯಾನೇಜರ್, ಭದ್ರತಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

assault on a passenger
ಪ್ರಯಾಣಿಕನ ಮೇಲೆ ಹಲ್ಲೆ

ಬೆಂಗಳೂರು:ಟಿಕೆಟ್ ವಿಚಾರವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ತೆರಳಿದ್ದ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿರುವ ಆರೋಪದಡಿ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಹಾಗೂ ಭದ್ರತಾ ಸಿಬ್ಬಂದಿ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ವ್ಯಾಪಾರಿ ಜಿ. ರಾಘವೇಂದ್ರ ಎಂಬವರು ನೀಡಿರುವ ದೂರಿನ ಅನ್ವಯ ಕೆಎಸ್‌ಆರ್‌ಟಿಸಿ ಟರ್ಮಿನಲ್ 2 ಡಿಪೋ ವ್ಯವಸ್ಥಾಪಕ ಮತ್ತು ಭದ್ರತಾ ಸಿಬ್ಬಂದಿ ಸತೀಶ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಯಾಣಿಕ ನೀಡಿದ ದೂರಿನಲ್ಲೇನಿದೆ?:ಡಿಸೆಂಬರ್ 23 ರಂದು ರಾತ್ರಿ 12.15ರ ಸುಮಾರಿಗೆ ಬೆಂಗಳೂರಿನಿಂದ ಹಿರಿಯೂರಿಗೆ ಹೊರಟಿದ್ದ ರಾಘವೇಂದ್ರ, ಕೆಎಸ್‌ಆರ್‌ಟಿಸಿ 1ನೇ ಟರ್ಮಿನಲ್‌ಗೆ ಬಂದಿದ್ದರು. ಬಳಿಕ ಬೆಂಗಳೂರು ಹರಿಹರ ಮಾರ್ಗದ ಬಸ್ ಹತ್ತಿ ಹಿರಿಯೂರಿಗೆ ಟಿಕೆಟ್ ನೀಡುವಂತೆ ನಿರ್ವಾಹಕನನ್ನ ಕೇಳಿದ್ದರು. ಆದರೆ, ''ಬಸ್ ಹಿರಿಯೂರಿನ ಒಳಗೆ ಹೋಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುತ್ತದೆ. ಬೈಪಾಸ್ ಬಳಿ ನಿಲ್ಲಿಸುತ್ತೇವೆ'' ಎಂದು ನಿರ್ವಾಹಕ ತಿಳಿಸಿದ್ದ. ಈ ವೇಳೆ ''ಹಿರಿಯೂರಿಗೆ ಟಿಕೆಟ್ ನೀಡಿ, ಬೈಪಾಸ್ ಬಳಿಯೇ ನಾನು ಇಳಿದುಕೊಳ್ಳುತ್ತೇನೆ'' ಎಂದು ರಾಘವೇಂದ್ರ ತಿಳಿಸಿದ್ದರು.

ಅದಕ್ಕೆ, ''ಚಿತ್ರದುರ್ಗದ ಟಿಕೆಟ್ ಪಡೆದರೆ ಮಾತ್ರ, ಹಿರಿಯೂರಿನಲ್ಲಿ ಇಳಿಸುತ್ತೇನೆ'' ಎಂಬುದಾಗಿ ನಿರ್ವಾಹಕ ಹೇಳಿದ್ದ. ''ಹಿರಿಯೂರು ಬದಲು ಚಿತ್ರದುರ್ಗಕ್ಕೆ ಏಕೆ ಟಿಕೆಟ್ ತೆಗೆದುಕೊಳ್ಳಬೇಕು'' ಎಂದು ರಾಘವೇಂದ್ರ ಪ್ರಶ್ನಿಸಿದಾಗ, ನಿರ್ವಾಹಕ ಅವರನ್ನ ಬಸ್‌ನಿಂದ ಇಳಿಸಿದ್ದ. ತಕ್ಷಣ ಡಿಪೋ ಮ್ಯಾನೇಜರ್ ಬಳಿ ತೆರಳಿದ್ದ ರಾಘವೇಂದ್ರ, ಟಿಕೆಟ್ ವಿಚಾರವನ್ನು ಪ್ರಶ್ನಿಸಿದ್ದಾರೆ. ''ಹರಿಹರ ಅಥವಾ ಚಿತ್ರದುರ್ಗಕ್ಕೆ ಮಾತ್ರ ಟಿಕೆಟ್ ಪಡೆಯಬೇಕು'' ಎಂದು ಡಿಪೋ ಮ್ಯಾನೇಜರ್ ತಿಳಿಸಿದ್ದರು.

ಈ ವೇಳೆ ಮ್ಯಾನೇಜರ್ ಹೇಳಿಕೆಯನ್ನು ರಾಘವೇಂದ್ರ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಸತೀಶ್, ರಾಘವೇಂದ್ರ ಅವರಿಗೆ ಲಾಠಿಯಿಂದ ಹೊಡೆದು, ಕಾಲಿನಿಂದ ಎದೆಗೆ ಒದ್ದು ಎಳೆದಾಡಿ ಹಲ್ಲೆ ಮಾಡಿದ್ದಲ್ಲದೇ, ಮೊಬೈಲ್ ಸಹ ಕಸಿದುಕೊಂಡಿದ್ದ. ಸತೀಶ್ ಹಾಗೂ ವ್ಯವಸ್ಥಾಪಕ ಇಬ್ಬರು ಸೇರಿ ರಾಘವೇಂದ್ರ ಅವರನ್ನು ಎಳೆದಾಡಿ ಕೊಠಡಿಯೊಳಗೆ ತಳ್ಳಿದ್ದಾರೆ. ಬಳಿಕ ''ನಾನು ಹಿರಿಯೂರಿನವನೇ. ಅಲ್ಲಿ ನನ್ನ ಅಣ್ಣ ರೌಡಿಶೀಟರ್ ಇದ್ದಾನೆ. ನಿನ್ನನ್ನು ಕೊಲೆ ಮಾಡಿಸುತ್ತೇನೆ'' ಎಂದು ಸತೀಶ್ ಜೀವ ಬೆದರಿಕೆಯೊಡ್ಡಿದ್ದಾನೆ' ಎಂದು ರಾಘವೇಂದ್ರ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ರಾಘವೇಂದ್ರ ನೀಡಿರುವ ದೂರಿನ ಅನ್ವಯ ಡಿಪೋ ಮ್ಯಾನೇಜರ್ ಹಾಗೂ ಭದ್ರತಾ ಸಿಬ್ಬಂದಿ ಸತೀಶ್ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ:ತೆಲಂಗಾಣದಲ್ಲಿ ಕರ್ನಾಟಕ ಮಹಾರಾಷ್ಟ್ರ ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಐವರ ಸಾವು

ABOUT THE AUTHOR

...view details