ಕರ್ನಾಟಕ

karnataka

ETV Bharat / state

ಮೂರು ದಿನ ಏಷ್ಯಾದ ಅತಿ ದೊಡ್ಡ ಬೆಂಗಳೂರು ಟೆಕ್ ಸಮ್ಮಿಟ್ 2023ಕ್ಕೆ ಕ್ಷಣಗಣನೆ - Bengaluru Tech Summit 2023 begins

ನಾಳೆಯಿಂದ ಮೂರು ದಿನ ಏಷ್ಯಾದ ಅತಿ ದೊಡ್ಡ ಬೆಂಗಳೂರು ಟೆಕ್ ಸಮ್ಮಿಟ್ 2023 ಆರಂಭಗೊಳ್ಳಲಿದೆ.

Bengaluru Tech Summit 2023
Bengaluru Tech Summit 2023

By ETV Bharat Karnataka Team

Published : Nov 28, 2023, 10:59 PM IST

ಬೆಂಗಳೂರು: ಮೂರು ದಿನಗಳ ಕಾಲ ಬೆಂಗಳೂರು ಅರಮನೆಯಲ್ಲಿ 26ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್ 2023 ಆರಂಭವಾಗಲಿದೆ. ಬುಧವಾರದಿಂದ ಅಂದರೆ ನ.29 ರಿಂದ ಡಿ.1ವರೆಗೆ ಬೆಂಗಳೂರು ಅರಮನೆಯಲ್ಲಿ ನಡೆಯಲಿದ್ದು, ಏಷ್ಯಾದ ಅತಿ ದೊಡ್ಡ ಟೆಕ್ ಸಮ್ಮಿಟ್ ಇದಾಗಿರಲಿದೆ‌.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬಿಟಿಎಸ್ 2023ಗೆ ಚಾಲನೆ ನೀಡಲಿದ್ದಾರೆ. ಬಿಟಿಎಸ್​ನಲ್ಲಿ (ಬೆಂಗಳೂರು ಟೆಕ್ ಸಮ್ಮಿಟ್) ಒಟ್ಟು 75 ಸೆಷನ್, 400 ಸ್ಪೀಕರ್, 350 ಸ್ಟಾರ್ಟ್ ಅಪ್, 600 ಪ್ರದರ್ಶಕರು, 20,000 ಉದ್ಯಮಿಗಳು ಭಾಗವಹಿಸಲಿದ್ದಾರೆ. 30ಕ್ಕೂ ಅಧಿಕ ದೇಶಗಳು ಸಮ್ಮಿಟ್ ನಲ್ಲಿ ಭಾಗವಹಿಸಲಿವೆ. ಇದು ಏಷಿಯಾದ ದೊಡ್ಡ ಟೆಕ್ ಸಮ್ಮಿಟ್ ಆಗಿರಲಿದೆ.

ಬೆಂಗಳೂರು ಟೆಕ್ ಸಮ್ಮಿಟ್ 2023

ನಾರಾಯಣ ಮೂರ್ತಿಯೂ ಈ ಬಾರಿಯ ಬಿಟಿಎಸ್​ನಲ್ಲಿ ಭಾಗವಹಿಸಲಿದ್ದಾರೆ.‌ ಲೆಜೆಂಡ್, ಲೆಗಸಿ ಅಂಡ್ ಲೀಡರ್​ ಶಿಪ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೆರೋದಾ ಸಂಸ್ಥಾಪಕ ನಿಕಿಲ್ ಕಾಮತ್ ಜೊತೆ ಅವರು ಸಂವಾದ ನಡೆಸಿಕೊಡಲಿದ್ದಾರೆ‌. ಬ್ರೇಕಿಂಗ್ ಬೌಂಡರೀಸ್, ಇನ್ನೊವೇಷನ್ ಫ್ರಂ ಇಂಡಿಯಾ ಇಂಪಾಕ್ಟ್ ಫಾರ್ ದಿ ವರ್ಲ್ಡ್ ಎಂಬ ಥೀಮ್​ನೊಂದಿಗೆ ಈ ಸಮ್ಮಿಟ್ ನಡೆಯಲಿದೆ. ಈ ಬಾರಿಯ ಬಿಟಿಎಸ್​ನಲ್ಲಿ 33 ದೇಶಗಳ ಪೈಕಿ 17 ದೇಶಗಳು ತಾವೇ ಸೆಷನ್ ಕೈಗೊಳ್ಳಲಿದ್ದಾರೆ. ಬಿಟಿಎಸ್​ನಲ್ಲಿ ಭಾರತ - ಅಮೆರಿಕ ಟೆಕ್ ಕಾನ್ ಕ್ಲೇವ್ ನಡೆಯಲಿದೆ. ಇದರಿಂದ ನವೋದ್ಯನಗಳಿಗೆ ಸಾಕಷ್ಟು ಸಹಾಯವಾಗಲಿದೆ. ಅಮೆರಿಕದವರಿಗೂ ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಅನುಕೂಲವಾಗಲಿದೆ‌.

ಡಾ. ಕಿರಣ್ ಮಜುಂದಾರ್-ಶಾ, ಕ್ರಿಸ್ ಗೋಪಾಲಕೃಷ್ಣನ್, ಪ್ರಶಾಂತ್ ಪ್ರಕಾಶ್, ನಿವೃತಿ ರೈ, ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಇನ್ವೆಸ್ಟ್ ಇಂಡಿಯಾದ ಸಿಇಒ; ಬಿ.ವಿ.ನಾಯ್ಡು, ಅಧ್ಯಕ್ಷರು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್; ಮತ್ತು ಅರವಿಂದ್ ಕುಮಾರ್, ಭಾರತೀಯ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಮಹಾನಿರ್ದೇಶಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಬೆಂಗಳೂರು ಟೆಕ್ ಶೃಂಗಸಭೆ-2023 ವೈವಿಧ್ಯಮಯ ಮತ್ತು ಉತ್ಕೃಷ್ಟ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ, ಇದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಂವಾದಗಳು, ಡೀಪ್ ಟೆಕ್, ಸ್ಟಾರ್ಟ್-ಅಪ್‌ಗಳು ಮತ್ತು ಬಯೋಟೆಕ್, ಅಂತಾರಾಷ್ಟ್ರೀಯ ಪ್ರದರ್ಶನ, ಜಾಗತಿಕ ಆವಿಷ್ಕಾರ ಮೈತ್ರಿ, ಭಾರತ-ಅಮೆರಿಕ ಟೆಕ್ ಕಾನ್ಕ್ಲೇವ್, ಆರ್ ಅಂಡ್ ಡಿ-ಲ್ಯಾಬ್2-ಮಾರುಕಟ್ಟೆ, ಬಿ2ಬಿ ಸಭೆಗಳನ್ನು ಒಳಗೊಂಡಿರುತ್ತದೆ. ಎಸ್.ಟಿ.ಪಿ.ಐ-ಐಟಿ ರಫ್ತು ಪ್ರಶಸ್ತಿಗಳು, ಸ್ಮಾರ್ಟ್ ಬಯೋ ಪ್ರಶಸ್ತಿಗಳು, ವಿಸಿ ಪ್ರಶಸ್ತಿಗಳು, ಎಟಿಎಫ್ ಪ್ರಶಸ್ತಿಗಳು, ಗ್ರಾಮೀಣ ಐಟಿ ರಸಪ್ರಶ್ನೆ, ಬಯೋ ಕ್ವಿಜಾಂಡ್ ಬಯೋ ಪೋಸ್ಟರ್‌ಗಳು ಸಹ ಶೃಂಗಸಭೆಯ ಭಾಗವಾಗಿರಲಿದೆ.

ಈ ವರ್ಷದ ಬೆಂಗಳೂರು ಟೆಕ್ ಸಮಿಟ್ ಉದ್ದೇಶಿಸಿ ಮಾತನಾಡುವ ಕೆಲವು ಪ್ರಮುಖ ಗಣ್ಯರು ಮತ್ತು ಭಾಷಣಕಾರರ ಪೈಕಿ ಡಾ. ಆರ್.ಎ. ಮಶೇಲ್ಕರ್, ಮಾಜಿ ಡೈರೆಕ್ಟರ್ ಜನರಲ್, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್(ಸಿ.ಎಸ್.ಐ.ಆರ್), ನೊಬೆಲ್ ಪ್ರಶಸ್ತಿ ವಿಜೇತ ಅಮೇರಿಕನ್ ಜೀವಶಾಸ್ತ್ರಜ್ಞ ಡಾ. ಹೆಚ್. ರಾಬರ್ಟ್ ಹಾರ್ವಿಟ್ಜ್ ಸೇರಿದ್ದಾರೆ.

ಐಟಿಇ ಮತ್ತು ಡೀಪ್ ಟೆಕ್ ಟ್ರ್ಯಾಕ್ ಜಿಸಿಸಿಗಳಿಗೆ ಅವಕಾಶಗಳು, ಕೃತಕ ಬುದ್ಧಿಮತ್ತೆ, ಸುಸ್ಥಿರತೆಗಾಗಿ ತಂತ್ರಜ್ಞಾನ, ಭವಿಷ್ಯದ ಚಲನಶೀಲತೆ, ಸೈಬರ್‌ ಸುರಕ್ಷತೆ ಮತ್ತು ಸೈಬರ್‌ವಾರ್‌ಫೇರ್, 5ಜಿ ಅಳವಡಿಕೆ ಮತ್ತು ಭವಿಷ್ಯದ ವೈರ್‌ಲೆಸ್ ತಂತ್ರಜ್ಞಾನಗಳು, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳಂತಹ ಕೆಲವು ಆಸಕ್ತಿದಾಯಕ ಸೆಷನ್‌ಗಳನ್ನು ಟೆಕ್ ಸಮಿಟ್ ಹೊಂದಿರುತ್ತದೆ. ಬಯೋಟೆಕ್ ವಿಭಾಗವೂ ಮೌಲ್ಯಯುತ ಚರ್ಚೆ, ಸಂವಾದಗಳಿಂದ ಕೂಡಿರುತ್ತದೆ. ಕಾರ್ಬನ್ ಮುಕ್ತ ಭವಿಷ್ಯಕ್ಕಾಗಿ ಜೈವಿಕ ತಂತ್ರಜ್ಞಾನ, ಸಂಶ್ಲೇಷಿತ ಜೀವಶಾಸ್ತ್ರ, ಸುಸ್ಥಿರ ಆಹಾರ ಮತ್ತು ಕೃಷಿ-ವ್ಯವಸ್ಥೆಗಳು, ಭವಿಷ್ಯದ ಕಾಯಿಲೆಗಳನ್ನು ತಡೆಗಟ್ಟುವುದು ಮತ್ತು ಸಾಂಕ್ರಾಮಿಕ ರೋಗಗಳನ್ನು ದೂರ ಇಡುವುದು, ಬಯೋಟೆಕ್‌ನಲ್ಲಿ ಹೂಡಿಕೆ, ಕೌಶಲ್ಯ ಅಭಿವೃದ್ಧಿ, ನೀತಿ ಮತ್ತು ನಿಯಮಗಳಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಸೆಷನ್ ಅವಧಿಗಳನ್ನು ಹೊಂದಿರಲಿದೆ.

ಸಮ್ಮೇಳನದಲ್ಲಿ ಆಸ್ಟ್ರೇಲಿಯಾ, ಫಿನ್‌ಲ್ಯಾಂಡ್, ನೆದರ್‌ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಡೆನ್ಮಾರ್ಕ್ ಸೇರಿದಂತೆ ಪಾಲುದಾರ ರಾಷ್ಟ್ರಗಳನ್ನು ಒಳಗೊಂಡ ಸುಮಾರು ರಾಷ್ಟ್ರಗಳಾದ ಸ್ವೀಡನ್, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಇಸ್ರೇಲ್, ಪೋಲೆಂಡ್, ಆಸ್ಟ್ರಿಯಾ, ಜರ್ಮನಿ ಮತ್ತು ಎನ್.ಆರ್.ಡಬ್ಲ್ಯು, ಜಪಾನ್, ಸ್ವಿಟ್ಜರ್ಲೆಂಡ್, ಲಿಥುವೇನಿಯಾ ಮತ್ತು ಇಯು ಭಾಗವಹಿಸಲಿವೆ. ಬರ್ಲಿನ್ ದೇಶದ ಸೆನೆಟರ್ ಫ್ರಾನ್ಜಿಸ್ಕಾ ಗಿಫ್ಫೆ, ಜರ್ಮನಿಯ ಡಸೆಲ್ಡಾರ್ಫ್‌ನ ಮೇಯರ್ ಡಾ. ಸ್ಟೀಫನ್ ಕೆಲ್ಲರ್, ಕೆನಡಾದ ಒಂಟಾರಿಯೊದ ಆರ್ಥಿಕತೆ, ಉದ್ಯೋಗ ಸೃಷ್ಟಿ ಮತ್ತು ವ್ಯಾಪಾರದ ಸಚಿವ ವಿಕ್ಟರ್ ಫೆಡೆಲಿ ಅವರು ಜಿಐಎ ಸೆಷನ್‌ಗಳಲ್ಲಿ ಮಾತನಾಡಲಿದ್ದಾರೆ. ಇನ್ನೂ ಹಲವು ದೇಶಗಳ ಸಚಿವರ ನೇತೃತ್ವದ ನಿಯೋಗಗಳು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಚಂದ್ರಯಾನ-ಇಸ್ರೋ-ಬಾಹ್ಯಾಕಾಶ ಉದ್ಯಮದ ಪ್ರದರ್ಶನ ಮಳಿಗೆ:ʼಬೆಂಗಳೂರು ಟೆಕ್‌ ಸಮ್ಮಿಟ್‌ʼ ನಲ್ಲಿ ಈ ವರ್ಷ, ಚಂದ್ರಯಾನ-ಇಸ್ರೋ-ಬಾಹ್ಯಾಕಾಶ ಉದ್ಯಮದ ಪ್ರದರ್ಶನ ಮಳಿಗೆ ಇರಲಿದೆ. ಸಮ್ಮಿಟ್‌ನಲ್ಲಿ ನಿರ್ಮಾಣವಾಗಲಿರುವ ಈ ಮಳಿಗೆಯು ಭಾರತದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶನ ಮಾಡುವ ಟೆಕ್‌ ಸಮ್ಮಿಟ್‌ನ ಉದ್ದೇಶಕ್ಕೆ ಪೂರಕವಾಗಿರಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೆಚ್ಚಿಸಿಕೊಳ್ಳುತ್ತಿರುವ ಪ್ರಭಾವಕ್ಕೂ ಈ ಪ್ರದರ್ಶನ ಸಾಕ್ಷಿಯಾಗಲಿದೆ. ಜೊತೆಗೆ ಬಾಹ್ಯಾಕಾಶ ಸಂಶೋಧನೆಗೆ ಇಸ್ರೋ ನೀಡುತ್ತಿರುವ ಗಣನೀಯ ಕೊಡುಗೆಗಳ ಪ್ರದರ್ಶನವೂ ಇಲ್ಲಿ ಕಂಡುಬರಲಿದೆ. ನವೋದ್ಯಮಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು (SME) ಹಾಗೂ ಖಾಸಗಿ ಉದ್ಯಮಗಳು ಚಂದ್ರಯಾನ-3 ಯೋಜನೆಯ ಯಶಸ್ಸಿನಲ್ಲಿ ವಹಿಸಿದ ಪಾತ್ರವನ್ನು ʼಚಂದ್ರಯಾನʼ ಹೆಸರಿನ ಮಳಿಗೆ ಪ್ರದರ್ಶಿಸಲಿದೆ.

ಇದನ್ನೂ ಓದಿ:ನ. 29ರಿಂದ ಮೂರು ದಿನ ಬೆಂಗಳೂರು ಟೆಕ್ ಶೃಂಗಸಭೆ : ಸಚಿವ ಪ್ರಿಯಾಂಕ್ ಖರ್ಗೆ

ABOUT THE AUTHOR

...view details