ಬೆಂಗಳೂರು :ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಅಧಿಕಾರ ಇವತ್ತು ಇರುತ್ತೆ, ನಾಳೆ ಹೋಗುತ್ತೆ. ಆದರೆ, ಸಮಾಜದ ದೃಷ್ಟಿಯಿಂದ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು ಎನ್ನುವ ಮೂಲಕ ಅಸಮಾಧಾನಗೊಂಡಿದ್ದ ಆರ್.ಅಶೋಕ್ಗೆ ಡಿಸಿಎಂ ಅಶ್ವತ್ಥನಾರಾಯಣ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ನನ್ನ ಹಾಗೂ ಅಶೋಕ್ ನಡುವೆ ಯಾವುದೇ ಅಸಮಾಧಾನ ಇಲ್ಲ. ನಾವು ಇವಾಗಲೂ ಜೊತೆಯಲ್ಲಿ ಕುಳಿತುಕೊಂಡು ಊಟ ಮಾಡ್ತೀವಿ. ಅವರ ಜೊತೆಯಲ್ಲೇ ನಾನು ಓಡಾಡ್ತೀನಿ ಅವರ ಮೇಲೆ ನನಗೆ ಗೌರವ ಇದೆ. ನನಗೆ ಅವರು ಅಣ್ಣನ ಸಮಾನರು ಇಲ್ಲಿ ಅಧಿಕಾರ ಇನ್ನೊಂದು ಮತ್ತೊಂದು ಪ್ರಶ್ನೆ ಇಲ್ಲ. ಇವತ್ತು ಅಧಿಕಾರ ಇರುತ್ತದೆ ನಾಳೆ ಹೋಗುತ್ತದೆ. ಆದರೆ, ಸಂಬಂಧಗಳು ಮಾತ್ರ ಶಾಶ್ವತವಾಗಿ ಇರುತ್ತವೆ. ಸಂಬಂಧಗಳನ್ನು ಕೂಡ ನಾವು ಶಾಶ್ವತವಾಗಿ ಉಳಿಸಿಕೊಳ್ಳಬೇಕು. ಅಧಿಕಾರ ಯಾವಾಗಲೂ ಶಾಶ್ವತವಾಗಿರುವಂತದ್ದಲ್ಲ ಈ ಬಗ್ಗೆ ನಾನೇನು ಹೆಚ್ಚಿಗೆ ಮಹತ್ವ ಕೊಡಲ್ಲ ಎಂದರು.
ಅಧಿಕಾರ ಯಾರಿಗೂ ಶಾಶ್ವತ ಅಲ್ಲ : ಅಶೋಕ್ ಗೆ ಅಶ್ವತ್ಥನಾರಾಯಣ್ ಟಾಂಗ್! ಅಶೋಕ್ ಹಾಗೂ ನನ್ನ ನಡುವೆ ಏನೇ ಮನಸ್ಥಾಪ ಇದ್ದರೂ ಇದನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ. ನಾವು ಜೊತೆಗೆ ಹೋಗಬೇಕು. ಸಮಾಜದ ದೃಷ್ಟಿಯಿಂದ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಆ ದಾರಿಯಲ್ಲಿ ನಾವು ಕೆಲಸ ಮಾಡೋಣ ಎಂದು ಪರೋಕ್ಷವಾಗಿ ಆರ್ ಅಶೋಕ್ ಗೆ ಟಾಂಗ್ ಕೊಟ್ಟರು.
ಬೆಂಗಳೂರು ಉಸ್ತುವಾರಿಯಾಗಿ ಸಿಎಂ ಅವ್ರೇ ತಗೆದುಕೊಂಡಿರುವುದು ಒಳ್ಳೆಯದು. ಸಿಎಂ ಜೊತೆ ನಗರದ ಉಸ್ತುವಾರಿ ಇರೋದು ಬೆಂಗಳೂರು ಅಭಿವೃದ್ಧಿಗೆ ಸಹಕಾರಿಯಾಗಲಿದೆ, ಬಿಎಸ್ ವೈ ಜೊತೆ ನಾವು ಕೈಜೋಡಿಸಿಕೊಂಡು ಕೆಲಸ ಮಾಡುತ್ತೇವೆ.
ಒಟ್ಟಿನಲ್ಲಿ ಬೆಂಗಳೂರು ನಗರ ಅಭಿವೃದ್ಧಿಗೆ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಬೆಂಗಳೂರು ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು, ಕೇವಲ ಬೆಂಗಳೂರಿಗರಿಗೆ ಮಾತ್ರವಲ್ಲ. ಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕೆ ಒತ್ತು ನೀಡುತ್ತೇವೆ. ರಸ್ತೆ ಗುಂಡಿ ಮುಚ್ಚುವ ಕೆಲಸವಾಗುತ್ತೆ. ಸಿಎಂ ಅವ್ರೇ ಉಸ್ತುವಾರಿಯಾಗಿರೋದ್ರಿಂದ 15 ದಿನಕ್ಕೊಮ್ಮೆ ಸಿಟಿ ರೌಂಡ್ಸ್ ಹೊಡೆದು ಸಮಸ್ಯೆ ಬಗೆಹರಿಯುವಿಕೆಗೆ ಶ್ರಮಿಸುತ್ತಾರೆ ಎಂದರು.
ಈ ಬಗ್ಗೆ ಅಶೋಕ್ ಏನ್ ಅಂದ್ರು...?
ಜಿಲ್ಲಾ ಉಸ್ತುವಾರಿ ಏನು ಅಂತಾ ಪ್ರಮುಖ ಸ್ಥಾನ ಅಲ್ಲ. ಅದೇನು ಮಂತ್ರಿ ಪದವಿನಾ ಎಂದು ಬೆಂಗಳೂರು ಉಸ್ತುವಾರಿ ಕೈ ತಪ್ಪಿದ ವಿಚಾರಕ್ಕೆ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಸಸಿಗಳನ್ನು ನೆಡುವ ಮೂಲಕ ಪ್ರಧಾನಿ ಹುಟ್ಟುಹಬ್ಬವನ್ನು ಕಂದಾಯ ಸಚಿವ ಅರ್. ಅಶೋಕ್ ಆಚರಿಸಿದರು. ಕಬ್ಬನ್ ಪಾರ್ಕ್ ನಲ್ಲಿ ಸಸಿಗಳನ್ನು ನೆಟ್ಟು ಸಾರ್ವಜನಿಕರಿಗೆ ಹೂವಿನ ಗಿಡಗಳ ವಿತರಣೆ ಮಾಡಿ ಮೋದಿ ಜನ್ಮ ದಿನವನ್ನು ಆಚರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಬೆಂಗಳೂರು ಉಸ್ತುವಾರಿ ವಿಚಾರದಲ್ಲಿ ನಮ್ಮ ನಡುವೆ ಗೊಂದಲ ಇರಲಿಲ್ಲ. ನನಗೆ ಇದೇ ಬೇಕು, ಅದೇ ಬೇಕು ಅನ್ನೋ ಪ್ರವೃತ್ತಿ ಇಲ್ಲ. ಹಿಂದೆಯೂ ಕೂಡಾ ನಾನು ಮಂಡ್ಯ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಕೆಲಸ ಮಾಡುವವರಿಗೆ ಎಲ್ಲಾದರೇನು? ನಾನು ಕೆಲಸ ಮಾಡುವವನು ಎಂದರು. ಆದರೆ, ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿಗಳೇ ಇಟ್ಟುಕೊಂಡಿರುವ ವಿಚಾರಕ್ಕೆ ಅಶೋಕ್ ಪ್ರತಿಕ್ರಿಯೆ ನೀಡಲಿಲ್ಲ.
ಅನರ್ಹ ಶಾಸಕರ ವಿಚಾರದಲ್ಲಿ ಪದೇ ಪದೆ ಕೇಸ್ ಮುಂದೆ ಹೋಗುತ್ತಿರುವ ಕಾರಣ ಅವರಿಗೂ ಬೇಸರ ಆಗಿದೆ. ಶೀಘ್ರ ಇತ್ಯರ್ಥ ಆಗಬೇಕು ಎಂಬುದು ಎಲ್ಲರ ಬಯಕೆ. ನಿನ್ನೆಯೂ ಕೂಡಾ ಅವರು ನನ್ನ ಬಂದು ಭೇಟಿ ಮಾಡಿದ್ದರು. ನ್ಯಾಯಾಲಯದ ತೀರ್ಪು ಬಂದ ಮೇಲೆ ಚುನಾವಣಾ ಪ್ರಕ್ರಿಯೆ ಶುರುವಾಗುತ್ತದೆ. ತೀರ್ಪು ಬರುತ್ತದೋ, ಉಪಚುನಾವಣೆ ಆಗುತ್ತದೋ ಅಂತಾ ಇನ್ನೂ ಸ್ಪಷ್ಟತೆ ಇಲ್ಲ. ಅನರ್ಹ ಶಾಸಕರ ಭಾವನೆಗಳಿಗೆ ನಮ್ಮ ಸಹಮತ ಇದೆ ಎಂದರು.