ಬೆಂಗಳೂರು: ಟೌನ್ ಹಾಲ್ ಬಳಿ ಫ್ರೀ ಕಾಶ್ಮೀರ್ ಭಿತ್ತಿಪತ್ರ ಪ್ರದರ್ಶಿಸಿ, ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುದ್ರಾ ನಿವಾಸಕ್ಕೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಭೇಟಿ ನೀಡಿ, ಆಕೆ ಮನೆಯವರಿಂದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಅರುದ್ರಾ ಪ್ರಸ್ತುತ ಪಿಜಿಯೊಂದರಲ್ಲಿ ವಾಸವಿದ್ದು, ಈ ಮೊದಲು ಮಲ್ಲೇಶ್ವರಂ ಬಳಿ ಅಜ್ಜ-ಅಜ್ಜಿ ಜೊತೆ ವಾಸವಿದ್ದಳು ಎನ್ನಲಾಗ್ತಿದೆ. ತಂದೆ ನಾರಾಯಣ್ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ತಾಯಿ ರಮಾ ಫ್ಯಾಷನ್ ಡಿಸೈನಿಂಗ್ ಮಾಡುತ್ತಿದ್ದಾರೆ.
ತುಂಬು ಕುಂಟುಂಬದಲ್ಲಿ ಹುಟ್ಟಿದ ಈಕೆಯ ಮೊದಲ ಹೆಸರು ಅನ್ನಪೂರ್ಣ. ಎಡಪಂಥೀಯ ಚಿಂತನೆಗೆ ಪ್ರಭಾವಿತಳಾಗಿದ್ದಳು ಎನ್ನಲಾದ ಯುವತಿ ತನ್ನ ಹೆಸರನ್ನೇ ಬದಲಾಯಿಸಿಕೊಂಡು ಅರುದ್ರಾ ಎಂದು ಇಟ್ಟುಕೊಂಡಿದ್ದಾಳೆ. ಪೊಲೀಸ್ ಅಧಿಕಾರಿಗಳು ಅರುದ್ರಾ ಪೋಷಕರನ್ನು ವಿಚಾರಣೆ ನಡೆಸಿದ್ದಾರೆ.
ಈ ಕುರಿತು ಡಿಸಿಪಿ ಶಶಿಕುಮಾರ್, ಅಹಿತಕರ ಘಟನೆ ನಡೆಯಬಹುದು ಅಂತ ಇಲ್ಲಿ ರಕ್ಷಣೆ ನೀಡಲಾಗಿದೆ. ಈ ಮನೆಯಲ್ಲಿ ಆಕೆಯ ಅಜ್ಜಿ-ತಾತ ಮಾತ್ರ ಇದ್ದಾರೆ. ಈ ಹಿನ್ನೆಲೆ ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಅರುದ್ರಾ ತಾತ ಹಾಗೂ ಡಿಸಿಪಿ ಶಶಿಕುಮಾರ್ ಪ್ರತಿಕ್ರಿಯೆ ಅರುದ್ರಾ ತಾತ ರಾಮಸ್ವಾಮಿ ಪ್ರತಿಕ್ರಿಯಿಸಿ, ಆಕೆ ಘೋಷಣೆ ಕೂಗಿರುವ ಬಗ್ಗೆ ಏನು ಗೊತ್ತಿಲ್ಲ. ನನ್ನ ಮೊಮ್ಮಗಳ ಹೆಸರು ಅನ್ನಪೂರ್ಣ. ಒಳ್ಳೆ ಮನೆತನದಿಂದ ಬಂದಿದ್ದಾಳೆ. ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಓದಿದ್ದಾಳೆ. ಅವಳು ಕೆಲಸಕ್ಕೆ ಸೇರಿದ ಕಾರಣ ಅದಕ್ಕಾಗಿ ಬೇರೆಡೆ ಇದ್ದಳು. 10 ದಿನಗಳ ಹಿಂದೆ ಮನೆಗೆ ಬಂದಿದ್ದಳು. ಆಗಾಗ ಕರೆ ಮಾಡಿ ಮಾತನಾಡುತ್ತಿದ್ದಳು. ಸದ್ಯ ಆಕೆ ಸಿವಿ ರಾಮನ್ ನಗರದಲ್ಲಿ ವಾಸವಿದ್ದು, ಘೊಷಣೆ ಕೂಗಿದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲವೆಂದು ಅಜ್ಜ-ಅಜ್ಜಿ ಸ್ಪಷ್ಟಪಡಿಸಿದ್ದಾರೆ.