ಬೆಂಗಳೂರು: ಸಾಮಾನ್ಯ ಯೂಟೂಬ್ಅನ್ನು ಮನರಂಜನೆ, ತಂತ್ರಜ್ಞಾನ ಸೇರಿದಂತೆ ಇನ್ನಿತರ ವಿಷಯ ಮಾಹಿತಿಗಾಗಿ ವೀಕ್ಷಿಸುವವರ ಸಂಖ್ಯೆ ಹೆಚ್ಚು. ಆದ್ರೆ ಖದೀಮರು ದುಷ್ಕೃತ್ಯವೆಸಗಲು ಯೂಟೂಬ್ ಮೊರೆ ಹೋಗುತ್ತಿದ್ದರು.
ಯೂಟೂಬ್ ವೀಕ್ಷಿಸಿ ಎಟಿಎಂ ಯಂತ್ರದ ಸೆನ್ಸಾರ್ ಸಂಪರ್ಕ ಬ್ಲಾಕ್ ಮಾಡಿ ಹಣ ಲಪಟಾಯಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಗಾರೆ ಕೆಲಸಗಾರರನ್ನು ಸದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ವಿಪಿನ್ ವಾಲ್ ಮತ್ತು ಜ್ಞಾನ್ ಸಿಂಗ್ ಬಂಧಿತ ಆರೋಪಿಗಳು. ಇವರು ಜಯದೇವ ಸಿಗ್ನಲ್ ರಿಂಗ್ ರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂ ಕೇಂದ್ರದಲ್ಲಿ ಕೃತ್ಯ ಎಸಗಿದ್ದಾರೆ. ಆರೋಪಿಗಳು ಮೊದಲಿಗೆ ತಮ್ಮ ಎಟಿಎಂ ಕಾರ್ಡ್‌ನ್ನು ಎಟಿಎಂ ಯಂತ್ರದಲ್ಲಿ ಸ್ವೈಪ್ ಮಾಡುತ್ತಿದ್ದರು. ಯಂತ್ರದಿಂದ ಹಣ ಹೊರ ಬರಬೇಕೆನ್ನುವಷ್ಟರಲ್ಲಿ ಕೈ ಅಡ್ಡ ಹಿಡಿದು ಸೆನ್ಸಾರ್ ಬ್ಲಾಕ್ ಮಾಡಿ ನೋಟುಗಳನ್ನು ಎಳೆಯುತ್ತಿದ್ದರು. ಸೆನ್ಸಾರ್ ಬ್ಲಾಕ್ ಆದ ಹಿನ್ನೆಲೆಯಲ್ಲಿ ಎಟಿಎಂನಲ್ಲಿದ್ದ ಹಣ ಆರೋಪಿಗಳ ಕೈ ಸೇರಿದರೂ ಅವರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳ್ಳುತ್ತಿರಲಿಲ್ಲ.
ಆರೋಪಿಗಳು ಜಯದೇವ ಸಿಗ್ನಲ್‌ನ ರಿಂಗ್ ರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂ ಕೇಂದ್ರದಿಂದ 2 ಬಾರಿ 10 ಸಾವಿರ ರೂ. ಇದೇ ಮಾದರಿಯಲ್ಲಿ ಲಪಟಾಯಿಸಿದ್ದರು. ಎಟಿಎಂ ಯಂತ್ರದಲ್ಲಿ ತುಂಬಲಾಗಿದ್ದ ಹಣದಲ್ಲಿ ಹೆಚ್ಚುವರಿಯಾಗಿ 10 ಸಾವಿರ ರೂ. ಕಡಿತಗೊಂಡಿರುವುದು ಬ್ಯಾಂಕ್ ಸಿಬ್ಬಂದಿ ಗಮನಕ್ಕೆ ಬಂದಿತ್ತು. ಕೂಡಲೇ ಎಚ್ಚೆತ್ತುಕೊಂಡು ಬ್ಯಾಂಕ್ ಸಿಬ್ಬಂದಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
ಓದಿ:ಪರೀಕ್ಷೆ ಬರೆಯಲು 1,200 ಕಿ.ಮೀ. ದೂರ ಪ್ರಯಾಣ: ಹೆಂಡತಿಗೆ ಡಿ.ಎಡ್ ಪರೀಕ್ಷೆ, ಗಂಡನಿಗೆ ಅಗ್ನಿ ಪರೀಕ್ಷೆ!
ಆರೋಪಿಗಳು ಫೆ.4 ರಂದು ಮತ್ತೆ ಇದೇ ಎಟಿಎಂ ಕೇಂದ್ರಕ್ಕೆ ಬಂದು ಹಣ ತೆಗೆಯಲು ಪ್ರಯತ್ನಿಸಿದಾಗ ಇವರ ಮೇಲೆ ನಿಗಾ ಇಟ್ಟಿದ್ದ ಬ್ಯಾಂಕ್ ಸಿಬ್ಬಂದಿ ಆರೋಪಿಗಳನ್ನು ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದರು. ನಂತರ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದಾಗ ನಡೆದ ಕೃತ್ಯದ ಬಗ್ಗೆ ವಿವರಿಸಿದ್ದಾರೆ.
ಪೊಲೀಸರು ಎಟಿಎಂ ಕೇಂದ್ರದಲ್ಲಿದ್ದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ಆರೋಪಿಗಳ ಕೃತ್ಯ ಕಂಡು ಬಂದಿತ್ತು. ಗಾರೆ ಕೆಲಸ ಮಾಡುತ್ತಿದ್ದ ಕಡೆ ಪರಿಚಯವಾಗಿದ್ದ ವ್ಯಕ್ತಿವೋರ್ವ ಎಟಿಎಂನ ತಂತ್ರಜ್ಞಾನ ದುರುಪಯೋಗಪಡಿಸಿಕೊಳ್ಳಲು ತಿಳಿಸಿಕೊಟ್ಟಿರುವುದಾಗಿ ವಿಚಾರಣೆ ವೇಳೆ ಖದೀಮರು ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಗೆ ಈ ಕುರಿತು ತಿಳಿಸಿಕೊಟ್ಟಿರುವ ವ್ಯಕ್ತಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.