ಬೆಂಗಳೂರು: ಸ್ನೇಹಿತನ ಪ್ರೇಯಸಿಯ ಬರ್ತ್ ಡೇ ಪಾರ್ಟಿ ಮಾಡಿ ನಂತರ ಮತ್ತೆ ಮದ್ಯ ಖರೀದಿಸಲು ಬಂದು ಕ್ಷುಲ್ಲಕ ವಿಚಾರಕ್ಕೆ ಬಾರ್ನಲ್ಲಿ ಮಾರಕಾಸ್ತ್ರ ಬೀಸಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರೌಡಿಸಹಿತ ಇಬ್ಬರು ಆರೋಪಿಗಳನ್ನು ಆಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಂತೋಷ್, ರಾಮಾಂಜಿ ಹಾಗೂ ವಸೀಂ ಪಾಷಾ ಬಂಧಿತರು. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶ ಮೂಲದ ಅಫ್ತಾಬ್ನ ಪ್ರೇಯಸಿ ಮೀಶೋ ಎಂಬಾಕೆಯ ಬರ್ತ್ ಡೇ ಇದ್ದುದರಿಂದ ಫೆಬ್ರವರಿ 25ರಂದು ಪಾರ್ಟಿ ಮಾಡಿದ್ದ ಆರೋಪಿಗಳು ಬಳಿಕ ಮದ್ಯ ಖರೀದಿಸಲು ಆಡುಗೋಡಿಯ 80 ಫೀಟ್ ರಸ್ತೆಯಲ್ಲಿರುವ ನೀಲಾ ಬಾರ್ಗೆ ಬಂದಿದ್ದರು. ಮದ್ಯ ಖರೀದಿಯಲ್ಲಿದ್ದಾಗ ಕ್ಯಾಶ್ ಕೌಂಟರ್ ಬಳಿ ಅಡ್ಡ ನಿಂತಿದ್ದ ಮೀಶೋಳಿಗೆ ಬಾರ್ ಸಿಬ್ಬಂದಿಯಾಗಿರುವ ಪ್ರಸನ್ನ, ಪಕ್ಕಕ್ಕೆ ಸರಿಯುವಂತೆ ಹೇಳಿದ್ದನು. ಅಷ್ಟಕ್ಕೆ ರೊಚ್ಚಿಗೆದ್ದ ಆರೋಪಿಗಳು ಬಾರ್ ಸಿಬ್ಬಂದಿ ಜೊತೆ ಗಲಾಟೆ ಆರಂಭಿಸಿ ಬಾರ್ನಲ್ಲಿದ್ದ ಗಾಜುಗಳ ಮೇಲೆ ಮಾರಕಾಸ್ತ್ರ ಬೀಸಿ, ಸಿಬ್ಬಂದಿ ಪ್ರಸನ್ನ, ಯತೀಶ್ ಹಾಗೂ ಮಂಜುನಾಥ ಎಂಬುವವರ ಮೇಲೆ ಹಲ್ಲೆ ಮಾಡಿ ಬಳಿಕ ಆ ಸ್ಥಳದಿಂದ ತೆರಳಿದ್ದಾರೆ. ಆರೋಪಿಗಳ ಪುಂಡಾಟದ ದೃಶ್ಯ ಬಾರ್ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಾರ್ ಸಿಬ್ಬಂದಿ ಯತೀಶ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಆಡುಗೋಡಿ ಪೊಲೀಸರು ಸದ್ಯ ಆರೋಪಿಗಳಾದ ಸಂತೋಷ್, ರಾಮಾಂಜಿ ಹಾಗೂ ವಸೀಂನನ್ನ ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.