ಕರ್ನಾಟಕ

karnataka

ETV Bharat / state

ಸ್ನೇಹಿತನ ಅತ್ತೆ ವಿಳಾಸಕ್ಕೆ ನೆದರ್ ಲ್ಯಾಂಡ್​ನಿಂದ ಡ್ರಗ್ಸ್ ತರಿಸಿ ಮಾರಾಟ: ಅಂತಾರಾಜ್ಯ ಆರೋಪಿ ಬಂಧನ

ಕೊಯಮತ್ತೂರು ಮೂಲದ ಅರುಣ್ ಕುಮಾರ್ ಎಂಬಾತ ತನ್ನ ಸ್ನೇಹಿತನ ಅತ್ತೆ ವಿಳಾಸಕ್ಕೆ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ. ಈ ಹಿನ್ನೆಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Arrest of accused who was sell drugs
ಅಂತರರಾಜ್ಯ ಆರೋಪಿ ಬಂಧನ

By

Published : Nov 10, 2020, 1:07 AM IST

ಬೆಂಗಳೂರು: ಸ್ನೇಹಿತನ ಅತ್ತೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ವಿಳಾಸಕ್ಕೆ ವಿದೇಶದಿಂದ ಡ್ರಗ್ಸ್ ತರಿಸಿಕೊಂಡು ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೊಯಮತ್ತೂರು ಮೂಲದ ಅರುಣ್ ಕುಮಾರ್ ಬಂಧಿತ. ಆರೋಪಿಯಿಂದ ಎಲ್‌ಎಸ್‌ಡಿ ಡ್ರಗ್ಸ್ ಇದ್ದ ಪಾರ್ಸೆಲ್ ಜಪ್ತಿ ಮಾಡಿ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮಮೂರ್ತಿನಗರದ ಮದನ್‌ಕುಮಾರ್ ಹಾಗೂ ಆರೋಪಿ ಅರುಣ್ ಕುಮಾರ್ ಸ್ನೇಹಿತರು. ಮದನ್‌ ಕುಮಾರ್‌ನ ಅತ್ತೆ ರಾಮಮೂರ್ತಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಈಕೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ವಿಳಾಸಕ್ಕೆ ನೆದರ್‌ಲ್ಯಾಂಡ್‌ನಿಂದ ಪಾರ್ಸೆಲ್ ಬಂದಿತ್ತು. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಪರಿಶೀಲನೆ ವೇಳೆ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇರುವುದು ಕಂಡು ಬಂದಿತ್ತು. ಈ ಬಗ್ಗೆ ಸಿಸಿಬಿ ಪೊಲೀಸರ ಜೊತೆ ಮಾಹಿತಿ ಹಂಚಿಕೊಂಡಿದ್ದರು.

ಪಾರ್ಸೆಲ್‌ನಲ್ಲಿದ್ದ ಡ್ರಗ್ಸ್ ಕುರಿತು ಮದನ್ ಕುಮಾರ್‌ನ ಅತ್ತೆಯನ್ನು ವಿಚಾರಿಸಿದಾಗ ತನಗೇನು ಗೊತ್ತಿಲ್ಲ. ಕೊಯಮತ್ತೂರಿನ ಅರುಣ್‌ ಕುಮಾರ್ ನನ್ನ ವಿಳಾಸಕ್ಕೆ ತರಿಸಿದ್ದಾನೆ ಎಂದು ಹೇಳಿಕೆ ನೀಡಿದ್ದರು. ಅರುಣ್ ಕುಮಾರ್ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ನ.5ರಂದು ಡ್ರಗ್ಸ್ ಪಾರ್ಸೆಲ್ ತೆಗೆದುಕೊಂಡು ಹೋಗಲು ಬಂದಿದ್ದ. ಈ ವೇಳೆ ಬಂಧಿಸಲಾಗಿದೆ.

ಡಾರ್ಕ್‌ನೆಟ್ ಬಳಸಿ ನೆದರ್‌ಲ್ಯಾಂಡ್‌ನಿಂದ ತರಿಸಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹಲವು ತಿಂಗಳಿಂದ ಸ್ನೇಹಿತನ ಅತ್ತೆಗೆ ಗೊತ್ತಾಗದಂತೆ ಆಕೆಯ ವಿಳಾಸಕ್ಕೆ ಡ್ರಗ್ಸ್ ಸಾಗಾಣೆ ಮಾಡಿಕೊಂಡಿದ್ದ. ತಮಿಳುನಾಡು ಹಾಗೂ ಬೆಂಗಳೂರಿನ ಕಾಲೇಜು ವಿದ್ಯಾರ್ಥಿ ಮತ್ತು ಟೆಕ್ಕಿಗಳಿಗೆ ಮಾರಾಟ ಮಾಡಿ ಹಣ ಸಂಗ್ರಹಿಸುತ್ತಿದ್ದ. ಆರೋಪಿಯು ಮೋಜಿನ ಜೀವನಕ್ಕೆ ಅಂಟಿಕೊಂಡಿದ್ದು, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ದಂಧೆಯಲ್ಲಿ ತೊಡಗಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details