ಬೆಂಗಳೂರು:ಅತ್ಯಾಚಾರ ಮತ್ತು ಹೆಂಡ್ತಿ ಮೇಲೆ ನಡೆಸಿರುವ ಪ್ರಕರಣದ ಆರೋಪಿಸ್ಯಾಂಟ್ರೊ ರವಿ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಆದಷ್ಟು ಬೇಗ ಆತನನ್ನು ಬಂಧಿಸಲಾಗುವುದು. ಆತ ಎಲ್ಲಿಯೇ ತಲೆ ಮರೆಸಿಕೊಂಡಿದ್ದರೂ ನಮ್ಮ ಪೊಲೀಸರು ಬಂಧಿಸಿ ಕರೆತರಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಿಶೇಷವಾದ ತಂಡಗಳನ್ನು ರಚನೆ ಮಾಡಿ ರವಿಯ ಚಲನವಲನ ವೀಕ್ಷಣೆ ಮಾಡಲಾಗುತ್ತಿದೆ. ಆರೋಪಿ ಸ್ಯಾಂಟ್ರೊ ರವಿ ಹಿಂಬಾಲಕರನ್ನು ವಿಶೇಷ ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಸ್ಯಾಂಟ್ರೊ ರವಿಗಾಗಿ ಹುಡುಕಾಟ ನಡೆಯುತ್ತಿದೆ. ಅವನು ಎಲ್ಲಿದ್ದರೂ ನಮ್ಮ ಪೊಲೀಸರು ಆತನನ್ನು ಹುಡುಕಿಕೊಂಡು ಬರುತ್ತಾರೆ. ಎಲ್ಲವನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದರು.
ಗೃಹ ಸಚಿವರ ಮನೆಯಲ್ಲಿ ಸ್ಯಾಂಟ್ರೊ ರವಿ ಸಿಗಬಹುದು ಎನ್ನುವ ಪ್ರತಿಪಕ್ಷಗಳ ಹೇಳಿಕೆಗೆ ಕೆರಳಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಮನೆಯಲ್ಲೂ ಸ್ಯಾಂಟ್ರೊ ರವಿ ಸಿಗಬಹುದಲ್ವಾ? ಎಂದು ಪ್ರಶ್ನಿಸಿದರು. ಚುನಾವಣೆ ಸಂದರ್ಭದಲ್ಲಿ ಈ ರೀತಿ ಅರೋಪ ಮಾಡುತ್ತಾರೆ. ಇಂತಹ ಹೇಳಿಕೆಯಿಂದ ಏನೂ ಪ್ರಯೋಜನ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಕ್ತಪಾತ ಸಹಿಸಲ್ಲ..ಸಾಗರದಲ್ಲಿ ಹಿಂದೂ ಸಂಘಟನೆಯ ಸದಸ್ಯನ ಮೇಲೆ ನಡೆದ ಹಲ್ಲೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು ಆರಗ ಜ್ಞಾನೇಂದ್ರ, ಸಾಗರದಲ್ಲಿ ಒಬ್ಬ ವ್ಯಕ್ತಿ ದ್ವಿಚಕ್ರ ವಾಹನದ ಮೇಲೆ ಹೋಗುವಾಗ ಮಚ್ಚು ಬೀಸಿದ್ದಾನೆ. ಯಾವ ಧರ್ಮದವರಾದರೂ ಆರೋಪಿಯನ್ನು ಬಂಧಿಸಲಾಗುತ್ತದೆ. ಪ್ರಕರಣದ ವಿಚಾರಣೆ ನಡೆಯುತ್ತದೆ. ರಕ್ತಪಾತ ಮಾಡುವುದನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಶಾಂತಿ ಕಾಪಾಡಲು ಬೇಕಾದ ಮುನ್ನೆಚ್ಚರಿಕೆ ವಹಿಸಲಾಗುತ್ತದೆ ಎಂದರು.