ಬೆಂಗಳೂರು :ಹುಬ್ಬಳ್ಳಿಯ ಈದ್ಗಾ ಮೈದಾನದ ಹೆಸರನ್ನು ಕಿತ್ತೂರು ರಾಣಿ ಚೆನ್ನಮ್ಮ ಮೈದಾನ ಎಂಬುದಾಗಿ ಬದಲಾಯಿಸಲು ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಕೈಗೊಂಡಿದ್ದ ನಿರ್ಣಯದ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೂ ಮುನ್ನವೇ ನಿರ್ಣಯ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲಾಗಿದೆ. ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಪ್ರಕ್ರಿಯೆ ಪ್ರಶ್ನಿಸಿ ಉಡುಪಿ ಜಿಲ್ಲೆಯ ಸಲೈಹತ್ ಮೊಹಲ್ಲಾ ನಿವಾಸಿ ಹುಸೈನ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರ ಪೀಠ ವಿಚಾರಣೆ ನಡೆಸಿದೆ.
ಈ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಈದ್ಗಾ ಮೈದಾನದ ಹೆಸರನ್ನು ಬದಲಾಯಿಸುವ ಸಂಬಂಧ ಈವರೆಗೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದರು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ, ಈದ್ಗಾ ಮೈದಾನದ ಹೆಸರನ್ನು ‘ಕಿತ್ತೂರು ರಾಣಿ ಚೆನ್ನಮ್ಮ ಮೈದಾನ’ ಎಂಬುದಾಗಿ ಬದಲಾಯಿಸಲು ಪಾಲಿಕೆ 2022ರ ಆ. 25ರಂದು ನಿರ್ಣಯ ಕೈಗೊಂಡಿದೆ.
ಇದನ್ನೂ ಓದಿ :ಈದ್ಗಾ ಮೈದಾನದಲ್ಲಿ ಓಬವ್ವ ಜಯಂತಿ ಆಚರಿಸಲ್ಲ: ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ
ಈ ಸಂಬಂಧ 2023ರ ಫೆಬ್ರವರಿ 8 ರಂದು ಸಾರ್ವಜನಿಕರ ಆಕ್ಷೇಪಣೆ ಕೋರಲಾಗಿದೆ. ಅದರಂತೆ ಅರ್ಜಿದಾರರು ಸಹ ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ, ಈ ಆಕ್ಷೇಪಣೆ ಮೇಲೆ ಪಾಲಿಕೆಯು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅದಕ್ಕೂ ಮುನ್ನವೇ ಈ ಅರ್ಜಿ ಸಲ್ಲಿಸಲಾಗಿದೆ. ಆದ್ದರಿಂದ ಅರ್ಜಿಯು ಪೂರ್ಣಗೊಂಡಿಲ್ಲ ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ಆಕ್ಷೇಪಣೆ ಕುರಿತಂತೆ ಪಾಲಿಕೆಯು ವ್ಯತಿರಿಕ್ತ ನಿರ್ಣಯವನ್ನು ಕೈಗೊಂಡ ಪಕ್ಷದಲ್ಲಿ ಅರ್ಜಿದಾರರು ಮತ್ತೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಅರ್ಜಿದಾರರಿಗೆ ನ್ಯಾಯಪೀಠ ಸಲಹೆ ನೀಡಿತು. ಅದಕ್ಕೆ ಒಪ್ಪಿಗೆ ಸೂಚಿಸಿದ ಅರ್ಜಿದಾರರು, ಅರ್ಜಿಯನ್ನು ಹಿಂಪಡೆದುಕೊಂಡರು.