ಬೆಂಗಳೂರು:1 ರಿಂದ 12ನೇ ತರಗತಿವರೆಗೆ ಗೋವು ಮತ್ತು ಪಶುಸಂಗೋಪನೆಗೆ ಸಂಬಂಧಿಸಿದಂತೆ ಪಠ್ಯವನ್ನು ಅಳವಡಿಸುವಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿದ್ಯಾರ್ಥಿಗಳಿಗೆ ಸಾಮಾಜಿಕ ಪರಿಸರ ಅಧ್ಯಯನದ ಭಾಗವಾಗಿ ಭಾರತೀಯ ಗೋವುಗಳ ಜೊತೆಗಿರುವ ಮಾನವ ಸಂಬಂಧ ಹಾಗೂ ಜೈವಿಕ ವೈವಿಧ್ಯತೆ, ಪರಿಸರ ಅವಲಂಬನೆ, ಪರಿಸರ ಸಂರಕ್ಷಣೆ ಕುರಿತು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ತಿಳಿ ಹೇಳುವ ಕೆಲಸ ಆಗಬೇಕಾಗಿದೆ.
ಭಾರತೀಯ ಗೋವುಗಳು ಹಾಗೂ ಪಶುಸಂಗೋಪನೆಗೆ ಸಂಬಂಧಿಸಿದಂತೆ 1ನೇ ತರಗತಿಯಿಂದ 12ನೇ ತರಗತಿಯವರೆಗೆ ಪಠ್ಯ ಅಳವಡಿಸಿದಲ್ಲಿ ಮಕ್ಕಳಲ್ಲಿ ಗೋವುಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಸಹಾಯವಾಗುತ್ತದೆ ಎನ್ನುವ ಉದ್ದೇಶದಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಈ ಕುರಿತಾಗಿ ಪತ್ರ ಬರೆಯಲಾಗಿದೆ. ಶಿಕ್ಷಣ ಸಚಿವರೊಂದಿಗೆ ಇದನ್ನು ಚರ್ಚಿಸಿ ಗೋವುಗಳ ಬಗ್ಗೆ ಪಠ್ಯ ಅಳವಡಿಸಲು ಕೋರಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಗೋ ಉತ್ಪನ್ನಗಳಿಂದ ಔಷಧ:
ಗೋ ಉತ್ಪನ್ನಗಳಿಂದ ಔಷಧ ತಯಾರಿಸಿ ಮಾನವರ ಚಿಕಿತ್ಸೆಗೆ ಬಳಸಿಕೊಳ್ಳವ ಸಾಧ್ಯತೆಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅನುಮತಿ ಕೋರಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಗೋವಿನ ಉತ್ಪನ್ನಗಳು ನಮ್ಮ ನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿವೆ. ಪಾರಂಪರಿಕವಾಗಿ ಗೋ ಮೂತ್ರ, ಸಗಣಿ ಸಹ ಔಷಧ ರೂಪದಲ್ಲಿ ಬಳಕೆಯಾಗುತ್ತಿರುವುದಲ್ಲದೇ ಅನೇಕ ಕಾಯಿಲೆಗಳು ಪಂಚಗವ್ಯದಂತಹ ವಿಶಿಷ್ಟ ಸಂಯೋಜನೆಯಿಂದ ಗುಣಮುಖವಾದ ಉದಾಹರಣೆಗಳಿವೆ ಎಂದು ತಿಳಿಸಿದ್ದಾರೆ.
ಗೋ ಶಾಲೆಯ ವಿದ್ಯುತ್ ಬಿಲ್ ವಿನಾಯಿತಿಗೆ ಮನವಿ:
ಇತ್ತಿಚೇಗೆ ಗೋಶಾಲೆಗಳ ಪ್ರತಿನಿಧಿಗಳೊಂದಿನ ಸಭೆ ನಡೆಸಿದ ಸಂದರ್ಭದಲ್ಲಿ ಅನೇಕ ಗೋ ಶಾಲೆಯ ಪ್ರತಿನಿಧಿಗಳು ವಿದ್ಯುತ್ ಬಿಲ್ ಪಾವತಿಗೆ ವಿನಾಯಿತಿ ನೀಡುವ ಕುರಿತು ಕೋರಿಕೆ ಇಟ್ಟಿದ್ದರು. ಇದನ್ನು ಪರಿಗಣಿಸಿ ಗೋಶಾಲೆಯ ಚಟುವಟಿಕೆಗಳನ್ನು ಕೃಷಿ ಚಟುವಟಿಕೆ ಎಂದು ಪರಿಗಣಿಸಿ ವಿದ್ಯುತ್ ಬಿಲ್ ಪಾವತಿಗೆ ವಿನಾಯಿತಿ ಅಥವಾ ಸಬ್ಸಿಡಿ ನೀಡುವಂತೆ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಸೂಚನೆ:
ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದು ಗೋ ಶಾಲೆ ತೆರೆಯಲು ನಿರ್ಧರಿಸಲಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಆದಷ್ಟು ಬೇಗ ಸ್ಥಳ ಗುರುತಿಸಿ ಗೋ ಶಾಲೆ ಸ್ಥಾಪನೆಗೆ ಮುಂದಾಗಲು ಸೂಚನೆ ನೀಡಲಾಗಿದೆ. ಎಸ್.ಪಿ.ಸಿ.ಎ ಸಮಿತಿಯ ಅಧ್ಯಕ್ಷರು ಸಹ ಜಿಲ್ಲಾಧಿಕಾರಿಗಳೇ ಇರುವುದರಿಂದ ಇದರ ಸಮರ್ಪಕವಾದ ಅನುಷ್ಟಾನಕ್ಕೆ ಪ್ರತಿ ತಿಂಗಳ ಮೂರನೇ ಶನಿವಾರ ಅಥವಾ ಮೂರು ತಿಂಗಳಲ್ಲಿ ಎರಡು ಸಭೆಗಳನ್ನು ನಡೆಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಗೋವುಗಳ ಸಂಖ್ಯೆ ವೃದ್ಧಿಮಾಡಲು ಇಲಾಖೆಯಿಂದ ಎಲ್ಲ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಗೋವಿನೊಂದಿಗೆ ಧಾರ್ಮಿಕವಾಗಿ ಹಾಗೂ ಆರ್ಥಿಕವಾಗಿ ನಾವೆಲ್ಲ ಹೊಂದಿಕೊಂಡಿರುವುದರಿಂದ ಇದರ ಸಂರಕ್ಷಣೆ ಮತ್ತು ಸಂವರ್ಧನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಚಿವ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಇದನ್ನೂ ಓದಿ:ವೈಜ್ಞಾನಿಕವಾಗಿ SSLC ಪರೀಕ್ಷೆ ನಡೆಯಲಿದೆ, ಯಾವುದೇ ಭಯ ಬೇಡ : ಡಿಸಿಎಂ ಅಶ್ವತ್ಥ್ ನಾರಾಯಣ್ ಅಭಯ