ಕರ್ನಾಟಕ

karnataka

ETV Bharat / state

ಗೋವುಗಳನ್ನು ಏಕೆ ಕಡಿಯಬಾರದು; ಪಶು ಸಂಗೋಪನಾ ಸಚಿವರ ಹೇಳಿಕೆ ಖಂಡನೀಯ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ - ಈಟಿವಿ ಭಾರತ್​ ಕನ್ನಡ ನ್ಯೂಸ್

ಪಶು ಸಂಗೋಪನಾ ಸಚಿವ ವೆಂಕಟೇಶ್ ಹೇಳಿಕೆ ಕುರಿತು ಮಾಜಿ ಸಿಎಂ ಬೊಮ್ಮಾಯಿ ಸರಣಿ ಟ್ವೀಟ್​ ಮಾಡಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

By

Published : Jun 4, 2023, 4:03 PM IST

ಬೆಂಗಳೂರು : ಗೋವುಗಳನ್ನು ಏಕೆ ಕಡಿಯಬಾರದು ಎಂದು ಪ್ರಶ್ನಿಸಿರುವ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ಹೇಳಿಕೆ ಆಶ್ಚರ್ಯ ತಂದಿದ್ದು, ಅವರ ಹೇಳಿಕೆ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಲಿ ಎಂದೊ, ಅಥವಾ ಹೈ ಕಮಾಂಡ್ ಮೆಚ್ಚಿಸಲೊ ಎಂದು ಈ ರೀತಿ ಹೇಳಿಕೆಯನ್ನು ಸಚಿವರು ಕೊಡುತ್ತಿರುವುದು ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಭಾರತೀಯರಾದ ನಾವು ಗೋವಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು, ತಾಯಿ ಸ್ಥಾನದಲ್ಲಿ ಗೋವನ್ನು ಪೂಜಿಸುತ್ತೇವೆ. ಸಚಿವ ಕೆ. ವೆಂಕಟೇಶ್ ಅವರು ಯಾರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಲಿ ಎಂದೊ, ಅಥವಾ ಹೈ ಕಮಾಂಡ್ ಮೆಚ್ಚಿಸಲೊ ಎಂದು ಬೊಮ್ಮಾಯಿ ಟ್ವೀಟ್​ ಮಾಡುವ ಮೂಲಕ ಕಿಡಿಕಾರಿದ್ದಾರೆ.

ಗೋಹತ್ಯೆ ನಿಷೇಧ ಪ್ರಥಮವಾಗಿ ಪ್ರತಿಪಾದಿಸಿದ್ದು ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರು. ಪೂಜ್ಯ ಮಹಾತ್ಮಾ ಗಾಂಧಿ ಪ್ರತಿಪಾದಿಸಿದ ಗೋಹತ್ಯೆ ನಿಷೇಧವನ್ನು 1960 ರ ದಶಕದಲ್ಲಿ ಹಲವಾರು ರಾಜ್ಯಗಳಲ್ಲಿ ಕಾನೂನು ತರಲಾಗಿದೆ. ಸಚಿವರ ಹೇಳಿಕೆಯಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋವುಗಳ ಕಳ್ಳ ಸಾಗಾಣಿಕೆ, ಸಾಮೂಹಿಕ ಗೋ ಹತ್ಯೆ ಮಾಡುವ ಕಾನೂನು ಬಾಹಿರ ಕಾರ್ಖಾನೆಗಳು ತಲೆ ಎತ್ತಲಿವೆ.

ನಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಬಾಹಿರ ಕಸಾಯಿ ಖಾನೆಗಳನ್ನು ತಡೆಗಟ್ಟಲು ಕಾನೂನು ತರಲಾಗಿದೆ. ಕರ್ನಾಟಕದಲ್ಲಿ ಹೊಸ ಕಾಯಿದೆ ತಂದಿಲ್ಲ. ಇರುವ ಕಾನೂನಿಗೆ ಬಲ ತುಂಬಿದ್ದೇವೆ‌. ಈ ರೀತಿಯ ಹೇಳಿಕೆ ನೀಡುವ ಮೊದಲು ಸಚಿವರು ಆಲೋಚನೆ ಮಾಡಬೇಕು. ಈ ಬಗ್ಗೆ ಸಿಎಂ ಸಚಿವರಿಗೆ ಸೂಕ್ತ ಸಲಹೆ ನೀಡುವುದು ಅವಶ್ಯಕತೆ ಇದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯ ಮೂಲಕ ಪ್ರಭು ಚೌಹಾಣ್ ಆಗ್ರಹ :ಗೋವುಗಳನ್ನು ಏಕೆ ಕಡಿಯಬಾರದು ಎನ್ನುವ ನಿಮ್ಮ ಮನಸ್ಥಿತಿಯೇ ನನಗೆ ವಿಚಿತ್ರವಾಗಿ ಕಾಣಿಸುತ್ತಿದೆ. ಒಂದಿಷ್ಟು ಕಸಾಯಿ ಕಾಖಾನೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ, ಗೋವುಗಳ ದಾರುಣ ಅಂತ್ಯ ಎಲ್ಲವನ್ನು ನೋಡಿದ ನಂತರ ಮತ್ತೊಮ್ಮೆ ಆಲೋಚನೆ ಮಾಡಿ ಹೇಳಿಕೆ ನೀಡಿ ಎಂದು ಮಾಜಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪ್ರಭು ಚೌಹಾಣ್ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ತನ್ನ ನಿಜ ಬಣ್ಣವನ್ನು ತೋರಿಸಲು ಪ್ರಾರಂಭಿಸಿದೆ. ಯಾರ ಹೊಟ್ಟೆಯನ್ನು ತುಂಬಲು ಗೋವುಗಳನ್ನು ಕಡಿಯಲು ಪ್ರೇರಣೆ ನೀಡುತ್ತಿದ್ದೀರಿ? ಎಂದು ಅವರು ಈ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ಕಾಂಗ್ರೆಸ್ ಅವಧಿಯಲ್ಲಿ 1964ರಿಂದಲೂ ಅಸ್ತಿತ್ವದಲ್ಲಿತ್ತು. ಆಗಲೂ ಸಹ ಹಸುವನ್ನು ಕಡಿಯಬಾರದು ಎಂಬುದು ಕಾನೂನಾಗಿತ್ತು. ಆದರೆ ಆ ಕಾನೂನಿನಲ್ಲಿದ್ದ ಕೆಲ ದುರ್ಬಲವಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಗೋಹತ್ಯೆ ನಿಷೇಧ ಕಾಯ್ದೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಬಲಪಡಿಸಿದ್ದೇವೆ. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕೇವಲ ರಾಜಕೀಯ ಲಾಭ ನಷ್ಟದ ದೃಷ್ಟಿಯಿಂದ ನೋಡುವ ಬದಲು ಜನಸಾಮಾನ್ಯನ, ರೈತನ ಜೀವನದಲ್ಲಿ ಇರುವ ಅದರ ಭಾವನಾತ್ಮಕ ಸಂಬಂಧದ ಬಗ್ಗೆ ತಿಳಿದುಕೊಂಡು ಮಾತನಾಡುವುದು ಒಳ್ಳೆಯದು ಎಂದು ಪ್ರಭು ಚೌಹಾಣ್ ಹೇಳಿದ್ದಾರೆ.

ಮನೆಯಲ್ಲಿ ಗೋವು ಸಾಕುವುದಿಲ್ಲವೆಂದ ಮಾತ್ರಕ್ಕೆ ಅದರ ಬಗ್ಗೆ ಭಾವನಾತ್ಮಕ ಸಂಬಂಧ ಇರಬಾರದು ಎಂದೇನಿಲ್ಲ. ಅದು ತಾಯಿಯಂತೆ ನಿತ್ಯ ಪೂಜೆಗೊಳಗಾಗುವ ದೈವ ಎಂದು ಅವರು ಬಣ್ಣಿಸಿದ್ದಾರೆ. ಅದರ ಸಂರಕ್ಷಣೆ, ಪೋಷಣೆ ಮತ್ತು ಗೋ ತಳಿಗಳ ಅಭಿವೃದ್ಧಿ ಸರ್ಕಾರದ ಮೂಲ ಕರ್ತವ್ಯವಾಗಿರಬೇಕೇ ಹೊರತು ಗೋವುಗಳನ್ನು ಕಡಿಯುವುದಕ್ಕೆ ಪ್ರೇರೇಪಿಸುವುದಲ್ಲ ಎಂದು ಕೆ ವೆಂಕಟೇಶ್ ಹೇಳಿಕೆಯ ವಿರುದ್ಧ ಪ್ರಭು ಚೌಹಾಣ್ ಗುಡುಗಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ನಂತರ ಗೋವುಗಳ ಸಂರಕ್ಷಣೆಗೆ ಶ್ರಮ ಪಟ್ಟಿದ್ದೇವೆ. ಪ್ರಾಣಿ ಕಲ್ಯಾಣ ಸಹಾಯವಾಣಿ, ಪ್ರಾಣಿ ಕಲ್ಯಾಣ ಮಂಡಳಿ, ಜಿಲ್ಲೆಗೊಂದು ಗೋಶಾಲೆ, ಪಶು ಚಿಕಿತ್ಸಾ ವಾಹನ ಹೀಗೆ ಗೋ ಸಂರಕ್ಷಣೆಗೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಗೋವನ್ನು ಒಮ್ಮೆ ವೈಜ್ಞಾನಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಧ್ಯಯನ ನಡೆಸಿ ನಂತರ ತೀರ್ಮಾನಿಸಿ ಎಂದು ವೆಂಕಟೇಶ್ ಅವರಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಮಾಜಿ ಸಚಿವ ಪ್ರಭು ಚೌಹಾಣ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ :ರೈತರಿಗೆ ನಿಗದಿಪಡಿಸಿರುವ ಹಾಲಿನ ದರದಲ್ಲಿ ಕಡಿತ ಬೇಡ: ಸಿಎಂ ತಾಕೀತು

ABOUT THE AUTHOR

...view details