ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ವಿಮರ್ಶೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 21ರ ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪ್ರಕಟಿಸಿದೆ. ಇದರಿಂದಾಗಿ ಯುಗಾದಿ ಹಬ್ಬಕ್ಕೆ ಊರಿಗೆ ತೆರಳುವ ಸಿದ್ಧತೆಯಲ್ಲಿರುವವರಿಗೆ ಸಾರಿಗೆ ಮುಷ್ಕರದ ಬಿಸಿ ತಟ್ಟಲಿದೆ.
2023ರ ಮಾರ್ಚ್ 8ರಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಜೊತೆ ವೇತನ ಪರಿಷ್ಕರಣೆ ಕುರಿತು ಚರ್ಚಿಸಲಾಗಿದೆ. ಆದರೆ ಮೂಲ ವೇತನದ ಶೇ.10 ರಷ್ಟು ಹೆಚ್ಚಳದ ಭರವಸೆಗೆ ನಮ್ಮ ಸಮ್ಮತಿ ಇಲ್ಲದ ಕಾರಣ ಮತ್ತೊಮ್ಮೆ ಸಭೆ ನಡೆಸುವ ಆಶ್ವಾಸನ ನೀಡಲಾಗಿತ್ತು. ಆದರೆ ಸರ್ಕಾರ ನಮ್ಮ ಬೇಡಿಕೆಗಳ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ಲಕ್ಷಣಗಳ ಕಾಣುತ್ತಿಲ್ಲ. ಅಲ್ಲದೆ ಚುನಾವಣೆ ಆರಂಭದ ಹೊಸ್ತಿಲಿನಲ್ಲಿದ್ದೇವೆ. ಚುನಾವಣಾ ಆಯುಕ್ತರು ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಚುನಾವಣೆಯ ಪ್ರಕಟಣೆಯಾದರೆ ಸಾರಿಗೆ ನೌಕರರು ತಮ್ಮ ಬೇಡಿಕೆಗಳೆಲ್ಲಾ ಅನಿರ್ಧಿಷ್ಟವಾಧಿಗೆ ನೆನೆಗುದಿಗೆ ಬೀಳಬಹುದೆಂಬ ಭೀತಿಯಲ್ಲಿದ್ದಾರೆ. ಈಗಾಗಲೇ ಹಿಂದಿನ ವೇತನ ಹೆಚ್ಚಳದ ಅವಧಿಯ 39 ತಿಂಗಳುಗಳು ಕಳೆದಿದೆ. ಅಷ್ಟೆ ಅಲ್ಲದೆ ಬೆಲೆ ಏರಿಕೆಯಿಂದಲೂ ನೌಕರರು ತತ್ತರಿಸುತ್ತಿದ್ದಾರೆ. ಇವುಗಳ ಬಗ್ಗೆ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಸರ್ಕಾರದ ವಿಳಂಬ ಧೋರಣೆ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಜಂಟಿ ಕ್ರಿಯಾ ಸಮಿತಿಯು ಸಭೆ ಸೇರಿ, ಸುಧೀರ್ಘವಾಗಿ ಪರಿಸ್ಥಿತಿಯ ಅವಲೋಕನ ಮಾಡಿ ಸರ್ಕಾರದ ಕಣ್ತೆರೆಸಲು ನಾಲ್ಕೂ ನಿಗಮಗಳ ಎಲ್ಲಾ ವರ್ಗಗಳ ನೌಕರರೂ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ 2023ರ ಮಾರ್ಚ್ 21ರ ಮಂಗಳವಾರ ಬೆಳಿಗ್ಗೆ 6.00 ಗಂಟೆಯಿಂದ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ತೊಡಗಬೇಕು ಎನ್ನುವ ಒಮ್ಮತದ ನಿರ್ಣಯಕ್ಕೆ ಬಂದಿದೆ. ಹಾಗಾಗಿ ಯುಗಾದಿ ಮುನ್ನಾ ದಿನವೇ ರಾಜ್ಯದಲ್ಲಿ ಸಾರಿಗೆ ಮುಷ್ಕರ ಬಹುತೇಕ ಖಚಿತವಾಗಿದೆ. ಹಬ್ಬಕ್ಕೆ ಊರಿಗೆ ತೆರಳುವ ಸಿದ್ಧತೆ ಮಾಡಿಕೊಂಡಿರುವವರಿಗೆ ಸಾರಿಗೆ ಮುಷ್ಕರದ ಬಿಸಿ ತಟ್ಟಲಿದೆ.
ಬೇಡಿಕೆಗಳು:ಮೂಲ ವೇತನಕ್ಕೆ ಬಿ.ಡಿ.ಎ. ವಿಲೀನಗೊಳಿಸಿ (Merge), ಪರಿಷ್ಕೃತ ಮೂಲ ವೇತನದ ಶೇ.25 ರಷ್ಟನ್ನು ಹೆಚ್ಚಳ ಮಾಡಿ, ವೇತನ ಶ್ರೇಣಿಯನ್ನು ಸಿದ್ಧಪಡಿಸತಕ್ಕದ್ದು. ಇನ್ಕ್ರಿಮೆಂಟ್ ದರ ಪರಿಷ್ಕೃತ ಮೂಲ ವೇತನದ ಶೇ.3 ಇರತಕ್ಕದ್ದು.