ಬೆಂಗಳೂರು:ಮಾರ್ಚ್ 31 ರಂದು ರಾಜ್ಯಕ್ಕೆ ಬಿಜೆಪಿ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳ ಜೊತೆಯಲ್ಲಿ ಪಕ್ಷದ ಅಧಿಕೃತ ಸಭೆಯಲ್ಲಿಯೂ ಅವರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆ ರಾಜ್ಯ ಕೇಸರಿ ಪಡೆಯಲ್ಲಿ ಇದು ಮಿಂಚಿನ ಸಂಚಲನ ಮೂಡುವಂತೆ ಮಾಡಿದೆ.
ಮಾರ್ಚ್ 31 ರ ರಾತ್ರಿ 8 ಗಂಟೆಗೆ ನವದೆಹಲಿಯಿಂದ ವಾಯುಪಡೆ ವಿಶೇಷ ವಿಮಾನದ ಮೂಲಕ ಪ್ರಯಾಣಿಸಲಿರುವ ಅಮಿತ್ ಶಾ, ರಾತ್ರಿ 10.30 ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಂದು ರಾತ್ರಿ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್ 1 ರಂದು ಬೆಳಗ್ಗೆ 9.50 ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಾಯುಪಡೆ ಹೆಲಿಕಾಪ್ಟರ್ನಲ್ಲಿ ತುಮಕೂರಿಗೆ ಪ್ರಯಾಣಿಸಲಿದ್ದಾರೆ.
ಡಾ.ಶಿವಕುಮಾರ ಸ್ವಾಮೀಜಿ ಜನ್ಮದಿನಾಚರಣೆ ಕಾರ್ಯಕ್ರಮ: ಅಲ್ಲಿ ಅಂದು ಬೆಳಗ್ಗೆ 10.50ಕ್ಕೆ ಸಿದ್ದಗಂಗಾ ಮಠದ ಶ್ರೀಗಳಾದ ಲಿಂ. ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1.45 ಕ್ಕೆ ವಾಯುಪಡೆ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಗೆ ಭೇಟಿ ನೀಡಲಿದ್ದಾರೆ. 2.15 ಕ್ಕೆ ಸತ್ಯಸಾಯಿ ಗ್ರಾಮಕ್ಕೆ ರಸ್ತೆ ಮಾರ್ಗದ ಮೂಲಕ ತೆರಳಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3.45 ಕ್ಕೆ ಹೆಚ್ಎಎಲ್ಗೆ ವಾಪಸ್ ಆಗಮಿಸಲಿರುವ ಅಮಿತ್ ಶಾ, ಸಂಜೆ 4 ಗಂಟೆಗೆ ಅರಮನೆ ಮೈದಾನದಲ್ಲಿ ಸಹಕಾರ ಇಲಾಖೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಕ್ಷೀರ ಬ್ಯಾಂಕ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಂಜೆ 6 ಗಂಟೆಗೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಕೋರ್ ಕಮಿಟಿಗಾಗಿ ಒಂದೂವರೆ ಗಂಟೆ ಸಮಯ ನೀಡಿರುವ ಅಮಿತ್ ಶಾ ರಾಜ್ಯ ರಾಜಕೀಯ, ಪಕ್ಷ ಸಂಘಟನೆ, ಸರ್ಕಾರ, ಚುನಾವಣಾ ತಾಲೀಮು, ಸಂಪುಟ ವಿಸ್ತರಣೆ ಸೇರಿದಂತೆ ಸಮಗ್ರ ರಾಜಕೀಯ ವಿದ್ಯಮಾನಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ. ಹಾಗಾಗಿ ರಾಜ್ಯ ಬಿಜೆಪಿ ನಾಯಕರಲ್ಲಿ ಕುತೂಹಲ ಗರಿಗೆದರಿದೆ. ಏ.1 ರಂದು ರಾತ್ರಿ 9 ಗಂಟೆಗೆ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಾಯುಪಡೆ ವಿಮಾನದ ಮೂಲಕ ಅಮಿತ್ ಶಾ ನವದೆಹಲಿಗೆ ವಾಪಸ್ ತೆರಳಲಿದ್ದಾರೆ.
ಇದನ್ನೂ ಓದಿ:ಕೊಡಗಿನಲ್ಲಿ ಕಾಡುಪ್ರಾಣಿ ಹಾವಳಿ ತಡೆ ಕುರಿತು ಶೀಘ್ರ ಸಚಿವರ ನೇತೃತ್ವದಲ್ಲಿ ಸಭೆ: ಸಚಿವ ಶ್ರೀನಿವಾಸ ಪೂಜಾರಿ
ಬಿಎಸ್ವೈ ನಿವಾಸದಲ್ಲಿ ಮಹತ್ವದ ಸಭೆ:ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸದ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಅಮಿತ್ ಶಾ ಮುಂದೆ ಚರ್ಚಿಸಬೇಕಿರುವ ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು. ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಗೆ ಇಂದು ಬೆಳೆಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಭೇಟಿ ನೀಡಿದರು.
ಏಪ್ರಿಲ್ 1 ರಂದು ಸಂಜೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ಅಮಿತ್ ಶಾ ಸಮ್ಮುಖದಲ್ಲಿ ನಡೆಯಲಿದ್ದು, ಅಲ್ಲಿ ಪ್ರಸ್ತಾಪಿಸಬೇಕಿರುವ ವಿಷಯಗಳ ಕುರಿತು ಕೆಲಕಾಲ ಸಮಾಲೋಚನೆ ನಡೆಸಲಾಯಿತು. ಮುಂಬರಲಿರುವ ಚುನಾವಣಾ ದೃಷ್ಟಿಯಿಂದ ಏನೆಲ್ಲಾ ವಿಷಯ ಪ್ರಸ್ತಾಪಿಸಿ, ನಿರ್ಧಾರಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತು ಚರ್ಚಿಸಲಾಗಿದೆ.