ಬೆಂಗಳೂರು:ಮಾಜಿ ಕಾರ್ಪೊರೇಟರ್ ಸಂಬಂಧಿಯ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿದ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿತ್ತು. ಈ ಕುರಿತಾಗಿ ಇಂದು ಗುತ್ತಿಗೆದಾರ ಆರ್.ಅಂಬಿಕಾಪತಿ ಪುತ್ರ ಆರ್.ಎ.ಪ್ರದೀಪ್ ಅವರು ಐಟಿ ಇಲಾಖೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಇಲಾಖೆಯ ಪ್ರಾದೇಶಿಕ ಕಚೇರಿಗೆ ಹಾಜರಾಗಿದ್ದ ಅವರು ಸತತ 8 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ವಿಚಾರಣೆ ಮುಗಿಸಿ ಹೊರಬಂದು ಸುದ್ದಿಗಾರರ ಜತೆ ಮಾತನಾಡಿದ ಅವರು, "ಆರ್.ಟಿ.ನಗರ ಸಮೀಪದ ಸುಲ್ತಾನ್‌ಪಾಳ್ಯದ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕ ಹಣ ನನ್ನದೇ. ಆದರೆ, ಅಲ್ಲಿ 42 ಕೋಟಿ ರೂ. ಇರಲಿಲ್ಲ. 20 ಕೋಟಿ ರೂ. ಮಾತ್ರ ಇತ್ತು.ಭೂ ವ್ಯವಹಾರದ ಸಲುವಾಗಿ ಹಣ ಸಂಗ್ರಹ ಮಾಡಿರುವುದು ನಿಜ. ಇಷ್ಟಕ್ಕೂ ದಾಖಲೆಗಳನ್ನು ಐಟಿ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಇನ್ನೂ ಕೆಲವು ದಾಖಲೆಗಳನ್ನು ಕೇಳಿದ್ದು, ಅ.26ರಂದು ವಿಚಾರಣೆಗೆ ಬರುವಂತೆ ನೊಟೀಸ್ ಕೊಟ್ಟಿದ್ದಾರೆ. ಅಂದು ಕೆಲ ದಾಖಲೆ ಪತ್ರಗಳನ್ನು ಕೊಡುತ್ತೇನೆ. ನನಗೂ ರಾಜಕೀಯಕ್ಕೂ ಸಂಬಂಧ ಇಲ್ಲ. ಐಟಿ ಇಲಾಖೆ ವಿಚಾರಣೆ ನಡೆಯುತ್ತಿರುವ ಕಾರಣಕ್ಕೆ ಹೆಚ್ಚಿನ ಮಾಹಿತಿ ಕೊಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇನೆ. ಅ.21ರಂದು ನನ್ನ ಸಹೋದರ ಆರ್.ಎ.ಪ್ರಮೋದ್‌ಗೆ ವಿಚಾರಣೆಗೆ ಬರುವಂತೆ ನೊಟೀಸ್ ಕೊಟ್ಟಿದ್ದಾರೆ. ಅವರು ಸಹ ಹಾಜರಾಗುತ್ತಾರೆ" ಎಂದು ತಿಳಿಸಿದರು.