ಆನೇಕಲ್ :ಜನನಿಬಿಡ ಪ್ರದೇಶದಲ್ಲಿ ನಾಗರಹಾವು ಬಂದು ಮಲಗುವ ಮೂಲಕ ಜನರಲ್ಲಿ ವಿಸ್ಮಯ ಮೂಡಿಸಿದೆ. ಅಂದಹಾಗೆ ಆನೇಕಲ್ ಪಟ್ಟಣದ ನಾರಾಯಣಪುರದಲ್ಲಿ ಕೆರೆಯ ಮರವೊಂದರಲ್ಲಿ ಹಾವು ಮಲಗುತ್ತಿದೆ. ಈ ನಾಗರ ಹಾವನ್ನು ನೋಡಿ ಜನ ಅಚ್ಚರಿ ವ್ಯಕ್ತಪಡಿಸುವುದಲ್ಲದೆ ಅದನ್ನು ಪೂಜಿಸುತ್ತಿದ್ದಾರೆ.
ತಿಂಗಳಿಂದ ಇಲ್ಲೇ ಠಿಕಾಣಿ.. ಕಳೆದ ಒಂದೂವರೆ ಎರಡು ತಿಂಗಳಿನಿಂದ ಈ ವಿಸ್ಮಯ ನಡೆಯುತ್ತಿದ್ದು, ನಾಗರಹಾವು ಪ್ರತಿದಿನ ಗ್ರಾಮಕ್ಕೆ ಬಂದು ಸುತ್ತಾಡಿಕೊಂಡು ನಾರಾಯಣಪುರ ಕೆರೆಯ ಬಳಿ ಗಿಡದ ರೆಂಬೆಯ ಮೇಲೆ ಬಂದು ಮಲಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಬಂದು ಗಿಡದ ರೆಂಬೆ ಏರುತ್ತೆ, ಸಂಜೆ 5 ಗಂಟೆಗೆ ಮತ್ತೆ ಮರಳಿ ಹೊರಡುವ ನಾಗರಹಾವು ಗ್ರಾಮದಲ್ಲಿರುವ ಹುತ್ತದೊಳಗೆ ಸೇರುತ್ತದೆಯಂತೆ.
ಒಂದೇ ಸ್ಥಳದಲ್ಲಿ ಬಂದು ಮಲಗುವ ನಾಗ.. ಚಿಕ್ಕಕೆರೆ ಪಕ್ಕದಲ್ಲಿರುವ ಎರಡು ಅರಳಿಕಟ್ಟೆಯ ಬಳಿ ಗಿಡದ ಮೇಲೆ ನಾಗರಹಾವು ಬಂದು ಮಲಗುತ್ತಿದ್ದು, ರಸ್ತೆಯ ಪಕ್ಕದಲ್ಲಿ ಗಿಡ ಇದ್ದು ನೂರಾರು ಜನ ಸೇರುತ್ತಿದ್ದಾರೆ. ನೂರಾರು ಜನ ಪಕ್ಕದಲ್ಲಿ ನಿಂತರೂ ಕೂಡ ಅತ್ತಿತ್ತ ಸರಿಯದೆ ಹಾವು ಅದೇ ಜಾಗದಲ್ಲಿ ಮಲಗುತ್ತಿದೆ. ಪ್ರತಿ ದಿನ ಹಾವನ್ನು ನೋಡಲು ಆನೇಕಲ್ ಸುಪ್ತಮುತ್ತಲಿನಿಂದ ಜನಸಾಗರವೇ ಬರುತ್ತಿದೆ.