ಕರ್ನಾಟಕ

karnataka

ETV Bharat / state

ಶಾಲಾ ಮಕ್ಕಳಿಗೆ ಬಿಸಿಯೂಟ ತಪ್ಪಿಸಿದ್ದಕ್ಕೆ ಪಡಿತರದ ಜೊತೆ ಭತ್ಯೆ ನೀಡಬೇಕು: ಹೈಕೋರ್ಟ್

ಶಾಲಾ ಮಕ್ಕಳಿಗೆ ಬಿಸಿಯೂಟ ತಪ್ಪಿಸಿದ್ದಕ್ಕೆ ಪಡಿತರ ಜೊತೆ ಭತ್ಯೆ ನೀಡಬೇಕು ಎಂದು ಹೈಕೋರ್ಟ್​ ಸರ್ಕಾರಕ್ಕೆ ಹೇಳಿದೆ.

ಹೈಕೋರ್ಟ್
ಹೈಕೋರ್ಟ್

By

Published : Nov 23, 2020, 9:11 PM IST

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆ ರಾಜ್ಯದಲ್ಲಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಳಿಸಿದ್ದಕ್ಕೆ ಪರಿಹಾರವಾಗಿ ಪಡಿತರ ನೀಡುವ ಸರ್ಕಾರದ ನಿರ್ಧಾರವನ್ನು ಒಪ್ಪದ ಹೈಕೋರ್ಟ್, ಪಡಿತರದ ಜೊತೆಗೆ ಭತ್ಯೆ ಸಹ ನೀಡಬೇಕು ಎಂದಿದೆ.

ಕೊರೊನಾ ಪರಿಣಾಮ ಸಾರ್ವಜನಿಕರಿಗೆ ಉಂಟಾಗಿರುವ ಅನಾನುಕೂಲತೆಗಳನ್ನು ಬಗೆಹರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹಿಂದಿನ ವಿಚಾರಣೆ ಸಂದರ್ಭದಲ್ಲಿ ಪೀಠ, ಇಷ್ಟು ದಿನ ಬಿಸಿಯೂಟ ಪೂರೈಸದ ಸರ್ಕಾರ ಈಗ ಹೇಗೆ ಒಟ್ಟಾಗಿ ಮಕ್ಕಳಿಗೆ ಆಹಾರ ತಲುಪಿಸುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ನಿರ್ದೇಶಿಸಿತ್ತು. ಅರ್ಜಿ ಇಂದು ವಿಚಾರಣೆಗೆ ಬಂದಾಗ ಸರ್ಕಾರದ ಪರ ವಕೀಲರು ಮಾಹಿತಿ ನೀಡಿ, ಲಾಕ್​ಡೌನ್ ಇದ್ದುದರಿಂದ ಶಾಲಾ ಮಕ್ಕಳಿಗೆ ಜುಲೈನಿಂದ ಬಿಸಿಯೂಟ ಸ್ಥಗಿತಗೊಳಿಸಲಾಗಿತ್ತು.

ಹೀಗಾಗಿ ಅಷ್ಟು ದಿನಕ್ಕೂ ಮಕ್ಕಳಿಗೆ ಪಡಿತರ ವಿತರಣೆ ಮಾಡಲಾಗುತ್ತದೆ. ಶಾಲಾ ದಾಖಲಾತಿ ಪುಸ್ತಕಗಳಿಂದ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿ ಶಿಕ್ಷಕರ ಸಹಾಯದಿಂದ ಪಡಿತರ ವಿತರಿಸಲಾಗುತ್ತದೆ. ವಾಟ್ಸಪ್​​ ಗ್ರೂಪ್ ಹಾಗೂ ಫೋನ್ ನಂಬರ್‌ಗಳ ಮೂಲಕ ಆಹಾರ ಧಾನ್ಯ ಸಂಗ್ರಹಿಸಿಕೊಳ್ಳಲು ಮಾಹಿತಿ ನೀಡಲಾಗುವುದು ಎಂದು ತಿಳಿಸಿ, ಈ ಕುರಿತಂತೆ ಪ್ರಮಾಣಪತ್ರ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮಕ್ಕಳಿಗೆ ಊಟ ನೀಡದೆ ಅವರಿಗೆ ಸಂವಿಧಾನದತ್ತವಾಗಿ ಲಭಿಸಿದ ಮೂಲಭೂತ ಹಕ್ಕನ್ನು ಸರ್ಕಾರ ಉಲ್ಲಂಘಿಸಿದೆ. ಹೀಗಾಗಿ ಮಕ್ಕಳಿಗೆ ಕೇವಲ ಪಡಿತರ ವಿತರಣೆ ಮಾಡಿದರೆ ಸಾಲದು. ಪಡಿತರದ ಜೊತೆಗೆ ಭತ್ಯೆಯನ್ನೂ ನೀಡಬೇಕು ಎಂದು ಅಭಿಪ್ರಾಯಪಟ್ಟು, ಈ ಬಗ್ಗೆ ಮುಂದಿನ ಸೋಮವಾರದೊಳಗೆ ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಪ್ರಮಾಣಪತ್ರದ ವಿವರ: ಜೂನ್ - ಜುಲೈ ಅವಧಿಯ 53 ದಿನಗಳ ಪಡಿತರ ನವೆಂಬರ್ ತಿಂಗಳಲ್ಲಿ, ಆಗಸ್ಟ್​​ನಿಂದ ಅಕ್ಟೋಬರ್​​ವರೆಗಿನ 55 ದಿನಗಳ ಪಡಿತರ ಡಿಸೆಂಬರ್‌ನಲ್ಲಿ, ನವೆಂಬರ್-ಡಿಸೆಂಬರ್ ತಿಂಗಳ 49 ದಿನಗಳ ಪಡಿತರ 2021ರ ಜನವರಿಯಲ್ಲಿ, 2021ರ ಜನವರಿ ಮತ್ತು ಫೆಬ್ರವರಿ ತಿಂಗಳ 49 ದಿನಗಳ ಪಡಿತರವನ್ನು ಫೆಬ್ರವರಿಯಲ್ಲಿ ಹಾಗೂ ಮಾರ್ಚ್ ಮತ್ತು ಏಪ್ರಿಲ್ 2021ರ 34 ದಿನಗಳ ಪಡಿತರವನ್ನು ಮಾರ್ಚ್ ತಿಂಗಳಲ್ಲಿ ವಿತರಿಸಲಾಗುವುದು.

ಅಲ್ಲದೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿ ಪ್ರಾಥಮಿಕ ಶಾಲೆಯ 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಪ್ರತಿ ದಿನ 100 ಗ್ರಾಂ ಅಕ್ಕಿ ಮತ್ತು ಗೋಧಿ, 6ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ 7.45 ರೂಪಾಯಿ ಮೊತ್ತದ 150 ಗ್ರಾಂ ಅಕ್ಕಿ ಮತ್ತು ಗೋಧಿ ಹಾಗೂ 9 ಮತ್ತು 10ನೇ ತರಗತಿಯ ಮಕ್ಕಳಿಗೆ 7.45 ರೂಪಾಯಿ ಮೌಲ್ಯದ 150 ಗ್ರಾಂ ಅಕ್ಕಿ ವಿತರಿಸಲಾಗುವುದು. 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ 4.5 ಕೆಜಿ ಅಕ್ಕಿ, ಗೋಧಿ ಮತ್ತು ಬೇಳೆ ವಿತರಿಸಲಾಗುವುದು. ಅಗತ್ಯ ಆಹಾರದ ಜೊತೆಗೆ ರಾಜ್ಯದಲ್ಲಿ ಅಡುಗೆ ಮಾಡುವ ವೆಚ್ಚವನ್ನು ಪ್ರತಿ ಮಕ್ಕಳಿಗೂ ಒದಗಿಸಲಾಗುವುದು ಎಂದು ಸರ್ಕಾರ ಹೈಕೋರ್ಟ್​ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.

ABOUT THE AUTHOR

...view details