ಬೆಂಗಳೂರು:ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಶಶಿಕಲಾ ಅವರಿಗೆ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲು ಎರಡು ಕೋಟಿ ರೂ. ಲಂಚ ಪಡೆದ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿದ್ದ ಎಫ್‌ಐಆರ್ ರದ್ದು ಕೋರಿ ನಿವೃತ್ತ ಡಿಜಿಪಿ ಸತ್ಯನಾರಾಯಣ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.
ತಮ್ಮ ವಿರುದ್ಧ ಎಸಿಬಿ ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಸತ್ಯನಾರಾಯಣ ರಾವ್ 2018 ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ವಿ.ಹೊಸಮನಿ ಅವರ ಪೀಠ, ಪ್ರಕರಣ ಸಂಬಂಧ ರಾಜ್ಯ ಸರ್ಕಾರವು 2021ರ ಡಿಸೆಂಬರ್ 30 ರಂದು ಹೊರಡಿಸಿದ ಆದೇಶದಲ್ಲಿ ಅರ್ಜಿದಾರರನ್ನು ನಿರಪರಾಧಿ ಎಂಬುದಾಗಿ ಹೇಳಿದೆ.
ಜತೆಗೆ ಈ ಸಂಬಂಧ ತನಿಖೆ ನಡೆಸಿರುವ ನಿಖಾಧಿಕಾರಿಗಳು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಅರ್ಜಿದಾರರ ಹೆಸರಿಲ್ಲ. ಇತರೆ ಇಬ್ಬರ ವಿರುದ್ಧ ಮಾತ್ರ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಅದ್ದರಿಂದ ಈ ಅರ್ಜಿಯನ್ನು ಮುಂದುವರೆಸುವ ಅಗತ್ಯವಿಲ್ಲ. ಅದರಂತೆ ಅರ್ಜಿ ಇತ್ಯರ್ಥಪಡಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿತು. ಅಲ್ಲದೆ, ತಮ್ಮ ವಿರುದ್ಧ ಸರ್ಕಾರ ಯಾವುದಾದರೂ ಕ್ರಮ ಜರುಗಿಸಿದ ಪಕ್ಷದಲ್ಲಿ ಅರ್ಜಿದಾರರು ಸೂಕ್ತ ನ್ಯಾಯಾಲಯದ ಮೊರೆ ಹೋಗಲು ಸ್ವತಂತ್ರರಿದ್ದಾರೆ ಎಂದು ಆದೇಶದಲ್ಲಿ ನ್ಯಾಯಪೀಠ ಸ್ಪಷ್ಟಪಡಿಸಿದೆ.