ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಪರ ವಕೀಲರಾದ ಕೆ.ಎನ್ ಜಗದೀಶ್ ಕುಮಾರ್ ಹಾಗೂ ಮಂಜುನಾಥ್ಗೆ ತಮ್ಮದೇ ವಿವಾದಾತ್ಮಕ ಹೇಳಿಕೆಗಳಿಂದ ಸಂಕಷ್ಟ ಎದುರಾಗಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ(ಕೆಎಸ್ಬಿಸಿ) ಕುರಿತು ಭ್ರಷ್ಟಾಚಾರ ಆರೋಪ ಮಾಡಿದ ಹಿನ್ನೆಲೆ ವಕೀಲ ಮಂಜುನಾಥ್ ಸನ್ನದನ್ನು ಅಮಾನತು ಮಾಡಿ ಪರಿಷತ್ ಆದೇಶ ಹೊರಡಿಸಿದೆ. ವಿಚಾರಣೆ ಮುಗಿಯುವವರೆಗೂ ವಕೀಲ ವೃತ್ತಿ ಮಾಡದಂತೆ ಸೂಚಿಸಲಾಗಿದೆ. ಅಲ್ಲದೇ, ಮಂಜುನಾಥ್ ಹೇಳಿಕೆಗಳಿಗೆ ಸಂಬಂಧಿಸಿದಂತೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಕೆಎಸ್ಬಿಸಿ ಅಧ್ಯಕ್ಷ ಶ್ರೀನಿವಾಸ್ ಬಾಬು ಅವರು, ಪರಿಷತ್ತಿನ ಬಗ್ಗೆ ಮಂಜುನಾಥ್ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಪರಿಷತ್ ಸರ್ವಸದಸ್ಯರ ಸಭೆ ನಡೆಸಿ ಅವರ ಸನ್ನದನ್ನು ಅಮಾನತು ಮಾಡಿ ನಿರ್ಣಯ ಕೈಗೊಂಡಿದೆ. ಹಾಗೆಯೇ ಅವರ ಹೇಳಿಕೆಗಳಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಅದೇ ರೀತಿ ಕೆ.ಎನ್. ಜಗದೀಶ್ ಅವರ ಸದಸ್ಯತ್ವ ಮಾಹಿತಿ ಹಾಗೂ ಶಿಸ್ತು ಕ್ರಮ ಜರುಗಿಸುವ ಬಗ್ಗೆ ದೆಹಲಿ ವಕೀಲರ ಪರಿಷತ್ತಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯ ವಕೀಲರ ಪರಿಷತ್ತಿನಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲ. ವಕಾಲತ್ತು ಅರ್ಜಿಗಳಿಗೆ ಲಗತ್ತಿಸುವ ವೆಲ್ ಫೇರ್ ಸ್ಟ್ಯಾಂಪ್ಗಳ ನಿರ್ವಹಣೆಯನ್ನು ಪರಿಷತ್ತು ಕಾಳಜಿ ವಹಿಸಿ ನೋಡಿಕೊಳ್ಳುತ್ತಿದೆ. ಜತೆಗೆ ಪರಿಷತ್ತಿನ ಆದಾಯ, ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಪ್ರತಿವರ್ಷದ ಆಡಿಟ್ ವರದಿ ನಮ್ಮಲ್ಲಿದೆ. ಅವರಿಗೆ ಅಗತ್ಯವಿದ್ದರೆ ಬಂದು ಕೇಳಿ ತಿಳಿದುಕೊಳ್ಳಬೇಕಿತ್ತು. ನಾವು ಮಾಹಿತಿ, ದಾಖಲೆಗಳನ್ನು ನೀಡಲು ಸಿದ್ಧರಿದ್ದೆವು. ಆದರೆ, ಅವರು ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ಹೇಳಿಕೆಗಳನ್ನು ನೀಡಿ, ಸಂಸ್ಥೆಯ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಹೀಗಾಗಿ ಅಮಾನತು ಮಾಡಲಾಗಿದೆ ಎಂದು ಪರಿಷತ್ ಅಧ್ಯಕ್ಷ ಶ್ರೀನಿವಾಸ ಬಾಬು ಸ್ಪಷ್ಟನೆ ನೀಡಿದ್ದಾರೆ.
ಮಂಜುನಾಥ್ ಆರೋಪ: ಸಿಡಿ ಪ್ರಕರಣದ ಯುವತಿ ಪರ ವಕೀಲರಾದ ಜಗದೀಶ್ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿಲ್ಲ ಎಂಬ ಮಾಹಿತಿ ಶುಕ್ರವಾರ ಬಹಿರಂಗವಾಗಿತ್ತು. ಈ ಹಿನ್ನೆಲೆ ಜಗದೀಶ್ ಹಾಗೂ ಮಂಜುನಾಥ್ ಫೇಸ್ಬುಕ್ ಲೈವ್ನಲ್ಲಿ ರಾಜ್ಯ ವಕೀಲರ ಪರಿಷತ್ತಿನ ಬಗ್ಗೆ ಆರೋಪಗಳನ್ನು ಮಾಡಿ, ಪರಿಷತ್ ಅವ್ಯವಹಾರಗಳನ್ನು ಬಯಲಿಗೆಳೆಯುವುದಾಗಿ ಸವಾಲು ಹಾಕಿದ್ದರು. ಮಂಜುನಾಥ್ ಆರೋಪ ಮಾಡಿ, ರಾಜ್ಯ ವಕೀಲರ ಪರಿಷತ್ತಿನಲ್ಲಿ ನಕಲಿ ಸ್ಟ್ಯಾಂಪ್ ಜಾಲವಿದ್ದು, ತೆಲಗಿ ಪ್ರಕರಣವನ್ನೂ ಮೀರಿಸುತ್ತದೆ. ವಕೀಲರ ಕಲ್ಯಾಣ ನಿಧಿ ದುರ್ಬಳಕೆ ಆಗುತ್ತಿದೆ. ಪರಿಷತ್ ಆದಾಯಕ್ಕೆ ಲೆಕ್ಕವೇ ಇಲ್ಲ. ಪರಿಷತ್ನ ಸದಸ್ಯರು ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದಾರೆ ಎಂದೆಲ್ಲಾ ಆರೋಪ ಮಾಡಿದ್ದರು.
ಇದನ್ನೂ ಓದಿ..ರಾಜ್ಯ ವಕೀಲರ ಪರಿಷತ್ನಲ್ಲಿ ನೋಂದಣಿಯಾಗದೆ ಜಗದೀಶ್ ವಕಾಲತ್ತು!