ಬೆಂಗಳೂರು :ಕೊರೊನಾ ಪ್ಯಾಕೇಜ್ನಲ್ಲಿ ಕೆಲ ವರ್ಗಗಳನ್ನ ಕೈಬಿಟ್ಟಿರುವುದು, ಕಾರ್ಮಿಕರ ಸಮಸ್ಯೆ ಹಾಗೂ ಕೋವಿಡ್-19 ನಿಯಂತ್ರಣ ಸಂಬಂಧ ಸರ್ಕಾರದ ನಿರ್ಧಾರಗಳ ಬಗೆಗಿನ ಪ್ರತಿಪಕ್ಷಗಳ ನಿಲುವುಗಳ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಪ್ರತಿಪಕ್ಷ ಮುಖಂಡರು ಮಾತುಕತೆ ನಡೆಸುತ್ತಿದ್ದಾರೆ.
ಗೃಹ ಕಚೇರಿ ಕೃಷ್ಣಾಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ ಸೇರಿದಂತೆ ಪ್ರತಿ ಪಕ್ಷದ ನಾಯಕರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳ ನಿಯೋಗ ಭೇಟಿ ನೀಡಿತು.
ವಲಸೆ ಕಾರ್ಮಿಕರ ಸಮಸ್ಯೆ ಸೇರಿದಂತೆ ಲಾಕ್‌ಡೌನ್ ಸಂದರ್ಭದಲ್ಲಿ ಎದುರಾಗಿರುವ ಸಮಸ್ಯೆಗಳು,ರೈತ ಸಮುದಾಯದ ಸಂಕಷ್ಟಗಳ ಕುರಿತು ಸಿಎಂ ಜತೆಗೆ ಪ್ರತಿಪಕ್ಷ ನಾಯಕರು ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿರೋಧ ಪಕ್ಷಗಳು, ರೈತ ಸಂಘಟನೆಗಳ ಮುಖಂಡರ ನಿಯೋಗ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಹಕ್ಕೋತ್ತಾಯಗಳ ಪ್ರಮುಖ ಅಂಶಗಳು:
• ಕೊರೋನಾ ರೋಗ ನಿವಾರಣೆ ಹಾಗೂ ಲಾಕ್‍ಡೌನ್‍ನಿಂದಾಗಿ ಉಂಟಾಗಿರುವ ಜನರ ಸಂಕಷ್ಟಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಕನಿಷ್ಟ ರೂ.50,000/- ಕೋಟಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಬೇಕು.
• ರಾಜ್ಯವ್ಯಾಪಿ ರೈತರು ಬೆಳೆದಿರುವ ಹೂವು, ಹಣ್ಣು, ತರಕಾರಿ ಹಾಗೂ ಬೆಳೆಗಳ ಕಟಾವಿಗೆ ಅವಕಾಶ ಕಲ್ಪಿಸುವುದು ಮತ್ತು ಮಾರಾಟ ಮಾಡಲು ಸೂಕ್ತ ಸಾರಿಗೆ ವ್ಯವಸ್ಥೆ ಮತ್ತು ಮಾರುಕಟ್ಟೆ ಒದಗಿಸುವುದು.
• ರೈತರು ಬೆಳೆದಿರುವ ಸದರಿ ಪದಾರ್ಥಗಳನ್ನು ವ್ಯಾಪಾರಸ್ಥರು ತೆಗೆದುಕೊಳ್ಳದೆ ಇದ್ದ ಸಂದರ್ಭದಲ್ಲಿ ಸರ್ಕಾರವೇ ರೈತರ ಹೊಲದಿಂದ ನೇರವಾಗಿ ಬೆಳೆದ ಪದಾರ್ಥಗಳನ್ನು ಖರೀದಿಸಿ, ರೈತರಿಗೆ ಸಹಾಯ ಮಾಡುವುದು.
• ಲಾಕ್‍ಡೌನ್ ಅವಧಿಯಲಿ ನಷ್ಟ ಅನುಭವಿಸಿರುವ ರೈತರಿಗೆ ನಷ್ಟ ಪರಿಹಾರ ನೀಡುವುದು ಹಾಗೆಯೇ ಕೋಳಿ ಸಾಕಾಣಿಕೆ ಮಾಡಿ ಮಾರಾಟವಾಗದೆ ನಷ್ಟ ಅನುಭವಿಸಿರುವ ರೈತರಿಗೂ ಸಹ ಸೂಕ್ತ ನಷ್ಟ ಪರಿಹಾರ ನೀಡಬೇಕು.
• ರೈತರು ಬೆಳೆದ ಬೆಳೆ, ತರಕಾರಿ, ಹಣ್ಣು, ಹೂವು, ಪೌಲ್ಟ್ರಿ, ರೇಷ್ಮೆ ಮುಂತಾದ ಉತ್ಪನ್ನಗಳನ್ನು ಬೆಳೆದು ರೈತರು ನಷ್ಟದ ಕುರಿತು ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿ, ನ್ಯಾಯೋಚಿತವಾಗಿ ಕನಿಷ್ಟ ಶೇ.50% ರಷ್ಟು ಪರಿಹಾರವನ್ನು ಸಮರೋಪಾದಿಯಲ್ಲಿ ನೀಡಬೇಕು.
• ರೈತರು ಬೆಳೆದ ಪ್ರತಿ ಪದಾರ್ಥಗಳಿಗೂ ಉತ್ಪಾದನಾ ವೆಚ್ಚವನ್ನು ಆಧರಿಸಿ, ನಿಗದಿತ ಬೆಲೆಯನ್ನು ತುರ್ತಾಗಿ ನಿಗದಿ ಮಾಡುವುದು. ನಿಗದಿ ಮಾಡಿದ ದರಗಳಿಗಿಂತ ಬೆಲೆ ಕಡಿಮೆಯಾದರೆ ಸರ್ಕಾರವು ಮಧ್ಯ ಪ್ರವೇಶ ಮಾಡಿ ಪ್ರೋತ್ಸಾಹ ಧನ/ಬೆಂಬಲ ಬೆಲೆ ನೀಡಲು 5000 ಕೋಟಿ ರೂಗಳ ಆವರ್ತ ನಿಧಿಯನ್ನು ಸ್ಥಾಪಿಸಿ, ಆ ನಿಧಿಯನ್ನು ಬಳಸಿ ಎ.ಪಿ.ಎಂ.ಸಿ.ಗಳ ಮೂಲಕ ರೈತರ ಉತ್ಪನ್ನಗಳನ್ನು ಖರೀದಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವುದು.
• ಸರ್ಕಾರ ಈ ಕೂಡಲೇ ಬರಪೀಡಿತ ತಾಲ್ಲೂಕುಗಳಿಗೆ ನೀಡಬೇಕಾದ ಸವಲತ್ತುಗಳನ್ನು ನೀಡುವುದು. ಬರಗಾಲದಿಂದ ನಷ್ಟವಾಗಿರುವ ಬೆಳೆಗಳಿಗೂ ಸರ್ಕಾರ ಪರಿಹಾರ ನೀಡಬೇಕು.
• ಪೂರ್ವ ಮುಂಗಾರಿನ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಭತ್ತ, ಬಾಳೆ, ದ್ರಾಕ್ಷಿ, ಮಾವು, ಟೊಮೆಟೊ ಮುಂತಾದ ಬೇಸಿಗೆಯ ಬೆಳೆಗಳು ತೀವ್ರ ರೀತಿಯ ಹಾನಿಗೆ ಒಳಗಾಗಿವೆ. ಹಾನಿಗೊಳಗಾದ ಪ್ರದೇಶ ಎಷ್ಟು ಎಂಬುದರ ಕುರಿತು ಸಮರ್ಪಕವಾಗಿ ಜಂಟಿ ಸರ್ವೆ ನಡೆಸುವುದು ಮತ್ತು ಪ್ರತಿ ಹೆಕ್ಟೆರ್‍ಗೆ ನೀಡುತ್ತಿರುವ ಪರಿಹಾರ ಮೊತ್ತವಾದ ರೂ.13,500/- ಗಳನ್ನು ಈ ಹಿಂದೆ ನೀಡಿದಂತೆ ರೂ.25,000/-ಗಳಿಗೆ ಹೆಚ್ಚಿಸುವುದು.
• ರಾಜ್ಯದಲ್ಲಿ ರೈತರಿಗೆ ಪಾವತಿಸಬೇಕಾದ ಕಬ್ಬಿನ ಬಾಕಿ ಹಣ ಸುಮಾರು ರೂ.3,000/- ಕೋಟಿ ತುರ್ತಾಗಿ ಪಾವತಿಸುವಂತೆ ಆದೇಶ ಮಾಡಬೇಕು.
• ತೊಗರಿ ಬೆಳೆಗಾರರಿಗೆ ಬಾಕಿ ಹಣವನ್ನು ರೈತರಿಗೆ ಬಿಡುಗಡೆ ಮಾಡಬೇಕು.
• ಎಲ್ಲ ಸಹಕಾರಿ/ವಾಣಿಜ್ಯ ಬ್ಯಾಂಕ್‍ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕನಿಷ್ಟ ರೂ.10,000/- ಕೋಟಿಗಳನ್ನು ಬಿಡುಗಡೆ ಮಾಡಿ, ರೈತರಿಗೆ ಸಾಲ ಸೌಲಭ್ಯ ಒದಗಿಸಬೇಕು.