ಬೆಂಗಳೂರು: ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗಳನ್ನು ಈ ವರ್ಷದಿಂದಲೇ ಆರಂಭಿಸಲಾಗುವುದು ಎಂದು ಮೂಲಸೌಲಭ್ಯ ಅಭಿವೃದ್ಧಿ ಸಚಿವರ ಪರವಾಗಿ ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಇಂದು ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಬಸವನಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಮಾನ ನಿಲ್ದಾಣ ನಿರ್ಮಾಣ ಸ್ಥಳಕ್ಕೆ ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ತಜ್ಞರ ತಂಡವು ಈ ತಿಂಗಳು ಭೇಟಿ ನೀಡಿ ಸ್ಥಳ ಪರಿವೀಕ್ಷಣೆಯನ್ನು ಕೈಗೊಳ್ಳುವುದಾಗಿ ಹೇಳಿದೆ. ಈ ತಜ್ಞರ ತಂಡ ಭೇಟಿ ನೀಡಿದ ನಂತರ ನೀಡುವ ವರದಿಯನ್ನು ಆಧರಿಸಿ ಯೋಜನಾ ವರದಿಯನ್ನು ತಯಾರಿಸಲು ಸಮಾಲೋಚಕರನ್ನು ನೇಮಿಸಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಾಯಚೂರು ಜಿಲ್ಲೆ ಉಸ್ತುವಾರಿ ತಮ್ಮದಾಗಿದ್ದು, ಈ ಹಿಂದೆ ಆದ ತೀರ್ಮಾನದಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸುಮಾರು 62 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ತೀರ್ಮಾನ ಮಾಡಿದ್ದೇವೆ. ಈಗಾಗಲೇ 11.64 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ವಿಮಾನ ನಿಲ್ದಾಣ ಕಾಮಗಾರಿಗಳಿಗೆ ಮುಂದಿನ ವರ್ಷ ಬಜೆಟ್‌ನಲ್ಲಿ ಹಣ ನೀಡಿ ಎಂದು ಮುಖ್ಯಮಂತ್ರಿಗಳನ್ನು ಕೇಳಿದ್ದೇವೆ. ಈಗ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲೇ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಇದಕ್ಕೆ ಎಲ್ಲರೂ ಒಪ್ಪಿದ್ದಾರೆ ಎಂದು ಹೇಳಿದರು.
ಆಕ್ಷೇಪ:
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನಿಂದ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬದಲು ಸರ್ಕಾರದಿಂದ ಹಣ ಬಿಡುಗಡೆ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಕಾಂಗ್ರೆಸ್ ಸದಸ್ಯ ಪ್ರಿಯಾಂಕ ಖರ್ಗೆ ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಕ್ಷ್ಮಣ ಸವದಿ, ನೀವು ಬೇರೆ ಜಿಲ್ಲೆಯ ವಿಚಾರದಲ್ಲಿ ಏಕೆ ಮಾತನಾಡುತ್ತಿದ್ದೀರಿ, ಕಲ್ಯಾಣ ಕರ್ನಾಟಕ ಮಂಡಳಿಯ ಎಲ್ಲ ಶಾಸಕರು ಇದಕ್ಕೆ ಒಪ್ಪಿದ್ದಾರೆ. ರಾಯಚೂರಿನಲ್ಲಿ ವಿಮಾನ ನಿಲ್ದಾಣ ಆಗುವುದು ಇಷ್ಟವಿಲ್ಲವೇ? ಏಕೆ ಅಡ್ಡಿಪಡಿಸುತ್ತಿರಾ ಎಂದು ಪ್ರಿಯಾಂಕ ಖರ್ಗೆ ಅವರನ್ನು ಪ್ರಶ್ನಿಸಿದರು.
ಕ್ರಮ:
ವಿಜಯಪುರ ಜಿಲ್ಲೆ ನಾಗಾಠಾಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಸುವ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಹಾಗೂ ಮೇಲ್ವಿಚಾರಕಿಯರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆ ಶಾಸಕ ದೇವಾನಂದ್ ಚವ್ಹಾಣ್ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಸಚಿವೆ ಶಶಿಕಲಾ ಜೊಲ್ಲೆ ಅವರ ಪರವಾಗಿ ಉತ್ತರಿಸಿದ ಸಚಿವರು, ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಆಹಾರ ಪದಾರ್ಥಗಳನ್ನು ಇಲ್ಲಿನ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಹಾಗೂ ಮೇಲ್ವಿಚಾರಕಿಯರು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿದೆ. ಈಗಾಗಲೇ ಅವರ ವಿರುದ್ಧ ತನಿಖೆ ನಡೆಸಿದ್ದು, ಶೀಘ್ರದಲ್ಲೇ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಮಕ್ಕಳಿಗೆ ಆಹಾರ ಪೂರೈಕೆ ಮಾಡುವುದನ್ನು ನಾಲ್ಕು ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಿ ಪರೀಕ್ಷಿಸಿ ನಂತರವೇ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಲಾಗುವುದು ಎಂದರು.