ಬೆಂಗಳೂರು: 'ಮಲ್ಲಿಕಾರ್ಜುನ ಖರ್ಗೆ' ರಾಜ್ಯ ಕಾಂಗ್ರೆಸ್ನಲ್ಲಿ ಮೇಲ್ಪಕ್ತಿಯಲ್ಲಿ ಕೇಳಿಬರುವ ಹೆಸರು. ತಳಮಟ್ಟದ ಸಮುದಾಯದಿಂದ ಬೆಳೆದು ಬಂದು ಉನ್ನತ ಸ್ಥಾನಕ್ಕೇರಿರುವ ಸಂದರ್ಭದಲ್ಲಿಯೇ ರಾಜ್ಯ ವಿಧಾನಸಭೆ ಚುನಾವಣೆ ಬಂದಿರುವುದು ಅತ್ಯಂತ ಪ್ರಶಸ್ತ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸಿರುವ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ದೊಡ್ಡ ಆದರ್ಶ. ಇವರ ಸ್ಥಾನ, ನೇಮಕ, ಆಯ್ಕೆಯ ಪ್ರಭಾವದಿಂದಾಗಿ ರಾಜ್ಯದಲ್ಲಿ ಹಿಂದುಳಿದ ಅದರಲ್ಲೂ ದೊಡ್ಡ ಸಂಖ್ಯೆಯಲ್ಲಿರುವ ದಲಿತ ಸಮುದಾಯದ ಮತದಾರರು ಈ ಬಾರಿ ಕಾಂಗ್ರೆಸ್ ಕಡೆ ನಿಲ್ಲಲಿದ್ದಾರೆ ಎಂಬ ನಂಬಿಕೆಯಲ್ಲಿದ್ದಾರೆ. ದಲಿತ ಬಲಗೈ ಸಮುದಾಯದ ಪ್ರಮುಖ ನಾಯಕರಾಗಿರುವ ಖರ್ಗೆ ಹಿಂದುಳಿದ ವರ್ಗಗಳ ನೇತಾರರಾಗಿ ಗುರುತಿಸಿಕೊಂಡಿದ್ದಾರೆ. ಅವರು ಎಐಸಿಸಿ ಅಧ್ಯಕ್ಷರಾಗಿರುವುದು ಕಾಂಗ್ರೆಸ್ ಗೆಲುವಿಗೆ ಒಂದಿಷ್ಟು ಸಹಕಾರಿ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ಪೂರಕ ಹೇಳಿಕೆ: ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯದ ಹಿಂದುಳಿದ ವರ್ಗದವರ ಮತ ಸೆಳೆಯುವ ದೃಷ್ಟಿಯಿಂದ ಮಲ್ಲಿಕಾರ್ಜುನ ಖರ್ಗೆ ಪರ ಹೇಳಿಕೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗೋದಾದರೆ ಖುಷಿ. ನನ್ನ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ. ಈ ಮೂಲಕ ಖರ್ಗೆ ಅವರ ಒಲವು ಗಳಿಸಿದ್ದಾರೆ. ಜತೆಗೆ ಹಿಂದುಳಿದ ವರ್ಗದ ಮತ್ತೋರ್ವ ನಾಯಕ ಹಾಗೂ ಕುರುಬ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
"ಖರ್ಗೆ ಅವರು ಏನು ಇಚ್ಛೆ ಪಡುತ್ತಾರೋ, ಅದನ್ನು ಈಡೇರಿಸುವ ಕೆಲಸ ನನ್ನದು. ಅವರು ಸಿಎಂ ಆಗಲು ಬಯಸಿದರೆ ಅವರೊಟ್ಟಿಗೆ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. ಅವರ ಹಿರಿತನ, ತ್ಯಾಗವನ್ನು ಗೌರವಿಸುತ್ತೇನೆ. ಖರ್ಗೆ ಅವರು ನನ್ನ ನಾಯಕರು. ಅವರೇ ನನ್ನ ಅಧ್ಯಕ್ಷರು ಮತ್ತು ನನಗಿಂತ 20 ವರ್ಷಗಳ ಹಿರಿಯರು. ಅವರು ರಾಜ್ಯ ಮತ್ತು ದೇಶದ ಆಸ್ತಿ. ಪಕ್ಷ ಯಾವ ತೀರ್ಮಾನ ಮಾಡುತ್ತೋ ಅದಕ್ಕೆ ನಾನು ಬದ್ಧವಾಗಿರುತ್ತೇನೆ" ಎಂದು ಎರಡು ದಿನಗಳ ಹಿಂದೆ ಡಿ ಕೆ ಶಿವಕುಮಾರ್ ಹೇಳಿರುವುದು ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ.
ಅಲ್ಲಿಗೆ ರಾಜ್ಯ ರಾಜಕಾರಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಛಾಪು ಎಷ್ಟಿದೆ ಎಂಬ ಅರಿವು ಆಗುತ್ತದೆ. ಒಂದು ಹೇಳಿಕೆ ಕಾಂಗ್ರೆಸ್ ಪಾಲಿಗೆ ಈ ಹಿರಿಯ ನಾಯಕ ಎಷ್ಟು ಅನಿವಾರ್ಯ ಎನ್ನುವುದನ್ನು ತೋರಿಸುತ್ತದೆ. ಇವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಎಐಸಿಸಿ ನೇಮಿಸಿರುವುದು ಕೇವಲ ಕಲಬುರಗಿ ಜಿಲ್ಲೆಗೆ ಮಾತ್ರವಲ್ಲ, ಅಕ್ಕಪಕ್ಕದ ಜಿಲ್ಲೆಗಳೂ ಸೇರಿದಂತೆ ಒಟ್ಟಾರೆ ಉತ್ತರ ಕರ್ನಾಟಕ ಭಾಗಕ್ಕೆ ಹೊಸ ಚೈತನ್ಯ ಮೂಡಿದೆ. ಕಾಂಗ್ರೆಸ್ ಕಾರ್ಯಕರ್ತರು ಸಹ ಹೊಸ ಹುರುಪಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.