ಬೆಂಗಳೂರು: ಅಲೆಮಾರಿ ಸಮುದಾಯದವರಿಗೆ ಆಯೋಗ ರಚನೆಗೆ ಸಂಬಂಧಿಸಿದಂತೆ ಕಾನೂನು ಸಲಹೆ ಪಡೆದು ತೀರ್ಮಾನಕ್ಕೆ ಬರಲಾಗುವುದು. ಈ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಅನುದಾನ ನೀಡುವ ಬಗ್ಗೆ ಪರಿಶೀಲಿಸಿ, ಕ್ರಮ ವಹಿಸಲಾಗುವುದು. ಅಲೆಮಾರಿ ಜನಾಂಗಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಇವರಿಗೆ ವಿಶೇಷವಾಗಿ ವಸತಿ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಪರಿಶೀಲಿಸಲಾಗುವುದು. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು ಎಂದರು.
ಸಿಎಂ ಇಂದು ರಾಜ್ಯದ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಸಂಘಟನೆಗಳ ಸಮನ್ವಯ ಸಮಿತಿಯ ರಾಜ್ಯ ಮುಖಂಡರೊಂದಿಗೆ ಅಲೆಮಾರಿ ಜನರ ಕುಂದುಕೊರತೆಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು. ಅಲೆಮಾರಿಗಳ ಸಮಸ್ಯೆಗಳು ವಿಶಿಷ್ಟವಾಗಿದ್ದು, ಒಟ್ಟು 120 ಜಾತಿಗಳಿವೆ. ಈ ಪೈಕಿ ಎಸ್ಸಿ 51, ಎಸ್ಟಿ 23 ಹಾಗೂ ಹಿಂದುಳಿದ ವರ್ಗದ 46 ಜಾತಿಗಳಿವೆ. ವಿವಿಧ ರಾಜ್ಯ ಮಟ್ಟದ ಸಂಘಟನೆಗಳಿದ್ದು, ಅವುಗಳನ್ನು ಒಟ್ಟು ಸೇರಿಸಿ ಸಮನ್ವಯ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ಬದುಕುತ್ತಿರುವ, ಅಸ್ಮಿತೆ ಇಲ್ಲದ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ಸರ್ಕಾರ ಅಲೆಮಾರಿಗಳನ್ನು ಗುರುತಿಸಬೇಕಿದೆ. ದಾಖಲೆಗಳಲ್ಲಿ ಇವರು ಇಲ್ಲದಿರುವುದರಿಂದ ಸಮಾಜದ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ಜಾತಿ ಪ್ರಮಾಣಪತ್ರ ಕೂಡ ಇವರಿಗಿಲ್ಲ. ಸರ್ಕಾರ ಕೆಲವು ಜಾತಿಗಳನ್ನು ಮಾತ್ರ ಗುರುತಿಸಿದ್ದು, ಇವರನ್ನು ಗುರುತಿಸುವ ಔದಾರ್ಯವನ್ನು ಸರ್ಕಾರ ತೋರಬೇಕು. ಸಮಾನ ಕುಲ, ಗೋತ್ರ, ಭಾಷೆ ಇರುವ ಜಾತಿಗಳನ್ನು ಗುರುತಿಸಬೇಕಿದೆ ಎಂದು ಸಮಿತಿಯ ಮುಖಂಡರು ಮನವಿ ಮಾಡಿದರು.