ಬೆಂಗಳೂರು: ಸೋಮವಾರ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನಗರವನ್ನು ವಶಪಡಿಸಿಕೊಂಡಿದ್ದರು. ಪರಿಣಾಮ ಜೀವಭಯದಿಂದ ಅಲ್ಲಿನ ಜನತೆ ಓಡಿ ಹೋಗಿ ವಿಮಾನ ಏರುವ ಕರುಳು ಹಿಂಡುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ವಿಶ್ವಸಂಸ್ಥೆ ಕೂಡ ಉಗ್ರರ ಉಪಟಳವನ್ನು ಖಂಡಿಸಿತ್ತು. ಇದೀಗ ರಾಜಧಾನಿಯಲ್ಲಿರುವ ಆಫ್ಘನ್ ವಿದ್ಯಾರ್ಥಿಗಳು ಸಹ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ತಾಲಿಬಾನಿಗಳ ಅಟ್ಟಹಾಸ ನೆನೆದು ಆಫ್ಘನ್ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅರೆಸ್ಟ್ ಅಶ್ರಫ್ ಘನಿ ಎಂದು ಪೋಸ್ಟರ್ ಹಿಡಿದು ಬೆಂಗಳೂರಿನ ವಿ.ವಿ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ದೇಶ ಅಫ್ಘಾನಿಸ್ತಾನದಲ್ಲಿ ಪೋಷಕರ ಜೊತೆಗೆ ಮಾತನಾಡಿದ್ದೇವೆ. ಸದ್ಯ ಪರಿಸ್ಥಿತಿ ಸರಿಯಿದೆ. ಆದರೆ, ಮನೆಯಿಂದ ಹೊರಗೆ ಬರಲು ಆತಂಕವಿದೆ ಎಂದು ತಂದೆ, ತಾಯಿ ಹಾಗೂ ಬಂಧು - ಬಳಗದವರು ಹೇಳಿದ್ದಾರೆ ಎಂದು ತಿಳಿಸಿದರು.