ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ ಅಡಿ ಕೈಗೊಂಡಿರುವ ವಿಂಡ್‌ಟನಲ್ ರಸ್ತೆ ಜಂಕ್ಷನ್, ಸುರಂಜನ್ ದಾಸ್ ಜಂಕ್ಷನ್ ಮತ್ತು ಕುಂದಲಹಳ್ಳಿ ಜಂಕ್ಷನ್‌ನಲ್ಲಿ ಯೋಜಿಸಿರುವ ಅಂಡರ್‌ಪಾಸ್ ಕಾಮಗಾರಿಗಳನ್ನು ಆಡಳಿತಗಾರರಾದ ಗೌರವ್ ಗುಪ್ತಾ ಪರಿಶೀಲಿಸಿದರು.
ವಿಂಡ್‌ಟನಲ್ ಜಂಕ್ಷನ್ ಬಳಿ ನಿರ್ಮಿಸುತ್ತಿರುವ ಕೆಳ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಎನ್‌ಎಎಲ್ ಮತ್ತು ಇಸ್ರೋ ಸಂಸ್ಥೆಗೆ ಸೇರಿದ ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಒಂದು ಭಾಗದಲ್ಲಿ ಕೆಳ ಸೇತುವೆಯ ರಿಟೈನಿಂಗ್ ವಾಲ್ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ರಸ್ತೆಯ ಇನ್ನೊಂದು ಭಾಗದಲ್ಲಿ ಬದಲಿ ವಾಹನ ಸಂಚಾರಕ್ಕೆ ಅನುಮತಿ ಪಡೆದು ಸಂಚಾರಿ ಮಾರ್ಗ ಬದಲಾವಣೆಯಾದ ಕೂಡಲೆ ರಿಟೈನಿಂಗ್ ವಾಲ್ ಕಾಮಗಾರಿ ಮತ್ತು ಫ್ರೀ ಕಾಸ್ಟ್ ಬಾಕ್ಸ್ ಎಲಿಮೆಂಟ್ಸ್ ಅಳವಡಿಸಿ ಕಾಮಗಾರಿಯನ್ನು ಸೆಪ್ಟೆಂಬರ್‌ನೊಳಗೆ ಪೂರ್ಣಗೊಳಿಸಲು ಆಡಳಿತಗಾರರು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿಗಳ ಪರಿಶೀಲನೆ ನಡೆಸಿದ ಆಡಳಿತಾಧಿಕಾರಿ ಗೌರವ್ ಗುಪ್ತಾ ಸುರಂಜನ್ ದಾಸ್ ಜಂಕ್ಷನ್ :ನಂತರ ಸುರಂಜನ್ ದಾಸ್ ಜಂಕ್ಷನ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಅವರು, ಈಗಾಗಲೇ ಮಾರತಹಳ್ಳಿ ಕಡೆಯಿಂದ ಬೆಂಗಳೂರಿಗೆ ಬರುವ ಕಡೆ, ರಿಟೈನಿಂಗ್ ವಾಲ್ ಕಾಮಗಾರಿ ಪೂರ್ಣಗೊಂಡಿದೆ. ಮತ್ತೊಂದು ಭಾಗದಲ್ಲಿ ಕೆಲ ಮರಗಳ ಸ್ಥಳಾಂತರಿಸಬೇಕಾಗಿದೆ.
ಕೂಡಲೇ ಮರಗಳನ್ನು ಬೇರೆಡೆ ಸ್ಥಳಾಂತರಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದರು. ಅದರ ಜೊತೆಗೆ ಇನ್ನೊಂದು ಬದಿಯ ರಿಟೈನಿಂಗ್ ವಾಲ್ ಕಾಮಗಾರಿ ಮತ್ತು ಫ್ರೀ ಕಾಸ್ಟ್ ಬಾಕ್ಸ್ ಎಲಿಮೆಂಟ್ಸ್ ಅಳವಡಿಸಿ ಕಾಮಗಾರಿಯನ್ನು ಸೆಪ್ಟೆಂಬರ್ 2021ರೊಳಗೆ ಪೂರ್ಣಗೊಳಿಸಲು ಸೂಚಿಸಿದರು.
ಕುಂದಲಹಳ್ಳಿ ಜಂಕ್ಷನ್ :ಕೊನೆಯದಾಗಿ ಕುಂದಲಹಳ್ಳಿ ಜಂಕ್ಷನ್ ಬಳಿ ತಪಾಸಣೆ ನಡೆಸಿದ ಆಡಳಿತಗಾರರು, ಎರಡೂ ಬದಿ ರಿಟೈನಿಂಗ್ ವಾಲ್ ಕಾಮಗಾರಿ ಪೂರ್ಣಗೊಂಡಿದೆ. ಸರ್ವೀಸ್ ರಸ್ತೆ ಕಾಮಗಾರಿ ಅನುಷ್ಠಾನಕ್ಕೆ ಬಾಕಿ ಇರುವ 27 ಸ್ವತ್ತುಗಳ ಭೂಸ್ವಾಧೀನಕ್ಕೆ ಈಗಾಗಲೇ ಅನುಮತಿ ದೊರೆತಿದೆ. ಇನ್ನು, 10 ದಿನಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಅವಶ್ಯ ಜಾಗವನ್ನು ಹಸ್ತಾಂತರಿಸಿಕೊಂಡು ಕಾಮಗಾರಿಯನ್ನು ಜೂನ್-2021ರೊಳಗೆ ಪೂರ್ಣಗೊಳಿಸಲು ಸೂಚಿಸಿದರು.