ಬೆಂಗಳೂರು/ಧಾರವಾಡ:ನಿಷೇಧಿತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಸಂಘಟನೆಯ ಸದಸ್ಯರ ವಿರುದ್ಧ ಕಳೆದ ವರ್ಷ ಕೊರೊನಾ ನಿಯಮಗಳ ಉಲ್ಲಂಘನೆ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಖಾದರ್ ಭಾಷಾ ಸೇರಿದಂತೆ ಇತರೆ ಎಂಟು ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಎಂ ಖಾಜಿ ಅವರಿದ್ದ ಧಾರವಾಡದ ಹೈಕೋರ್ಟ್ ನ್ಯಾಯಪೀಠ ಪ್ರಕರಣ ರದ್ದು ಮಾಡಿದೆ.
ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಆರೋಪಿತರು ಸಭೆ ನಡೆಸಿದ ಸಂದರ್ಭದಲ್ಲಿ ಕೋವಿಡ್ ಮೂರನೇ ಅಲೆ ನಡೆಯುತ್ತಿತ್ತು. ಆಗ ಕೊರೊನಾ ಸೋಂಕು ಹರಡುವ ಸಾಧ್ಯತೆಯಿತ್ತು ಎಂದು ಆರೋಪಿಸಲಾಗಿದೆ. ಆದರೆ, ತನಿಖಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದವರು ಮತ್ತು ಪ್ರೇಕ್ಷಕರಾಗಿದ್ದವರಲ್ಲಿ ಯಾರಿಗಾದರು ಕೊರೊನಾ ಸೋಂಕು ಇತ್ತೇ ಎಂಬುದರ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿರಲಿಲ್ಲ. ಇದು ಐಪಿಸಿ 270 (ಮಾರಣಾಂತಿಕ ಕಾಯಿಲೆಯ ಸೋಂಕು ಹರಡುವುದು) ಅನ್ವಯ ಶಿಕ್ಷಾರ್ಹ ಅಪರಾಧವಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅಷ್ಟೇ ಅಲ್ಲದೆ, ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಸುಗ್ರೀವಾಜ್ಞೆ 2020 ವಿಶೇಷ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಅವಕಾಶವನ್ನು ಕಲ್ಪಿಸುತ್ತದೆ. ಯಾವುದೇ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಮಾಡಬಾರದು ಎಂಬುದಾಗಿದೆ. ಹೀಗಾಗಿ ಇದು ಶಿಕ್ಷಾರ್ಹ ಅಪರಾಧವನ್ನು ರೂಪಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಆರ್ಜಿದಾರರು ಯಾವುದೇ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧ ಯಾವುದೇ ಆರೋಪ ಸಾಬೀತಾಗುವಂತಹ ಸಾಕ್ಷ್ಯಾಧಾರಗಳು ಇಲ್ಲ. ಆದ್ದರಿಂದ ಪ್ರಕರಣವನ್ನು ರದ್ದು ಪಡಿಸುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.