ಬೆಂಗಳೂರು: ಹಿಂದೂ ದೇವತೆಗಳ ಕುರಿತಾಗಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪ ಕುರಿತಂತೆ ತಮ್ಮ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶ ನೀಡಿದ್ದು, ಅದರಂತೆ ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಹೇಳಿದ್ದಾರೆ.
ಹಿಂದೂ ದೇವತೆಗಳಿಗೆ ಅಪಮಾನ ಆರೋಪ: ಪೊಲೀಸ್ ತನಿಖೆಗೆ ಸಹಕರಿಸುವೆ- ಸಚಿವ ನಿರಾಣಿ
ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ ಆರೋಪದಡಿ ದಾಖಲಿಸಿರುವ ಪ್ರಕರಣ ಸಂಬಂಧ ಸಚಿವ ಮುರುಗೇಶ್ ಆರ್. ನಿರಾಣಿ ಅವರನ್ನು ತನಿಖೆಗೊಳಪಡಿಸಲು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕೊಡಿಗೆಹಳ್ಳಿ ಪೊಲೀಸರಿಗೆ ಆದೇಶಿಸಿದೆ.
'ಹಿಂದೂ ದೇವತೆಗಳಿಗೆ ನಾನು ಅಪಮಾನ ಮಾಡಿಲ್ಲ. ಎಲ್ಲ ಧರ್ಮಗಳನ್ನೂ ಅತ್ಯಂತ ಪ್ರೀತಿ ಮತ್ತು ಶ್ರದ್ಧೆಯಿಂದ ಕಾಣುತ್ತೇನೆ. ಕಣ್ತಪ್ಪಿನಿಂದಾದ ಘಟನೆ ಕುರಿತಂತೆ ಜನತೆಯಲ್ಲಿ ಕ್ಷಮೆ ಕೇಳಿದ್ದೇನೆ. ದೇಶದ ಕಾನೂನಿಗಿಂತ ಯಾರೂ ಕೂಡ ದೊಡ್ಡವರಿಲ್ಲ. ಈ ನೆಲದ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕೂಡ ನ್ಯಾಯಾಲಯದ ಆದೇಶಕ್ಕೆ ಬದ್ದನಾಗಿದ್ದೇನೆ. ಪೊಲೀಸರ ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇನೆ' ಎಂದು ತಿಳಿಸಿದ್ದಾರೆ.
'ಹಿಂದೂ ಧರ್ಮ ಆಚರಣೆ, ಸಂಪ್ರದಾಯ ಹಾಗೂ ದೇವತೆಗಳ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಯಾವುದೇ ಸಂದರ್ಭದಲ್ಲೂ ಹಿಂದೂ ಧರ್ಮಕ್ಕಾಗಲಿ, ದೇವತೆಗಳ ಬಗ್ಗೆ ಅಪಮಾನ ಮಾಡುವ ಕೆಲಸ ಮಾಡಿಲ್ಲ. ಇದು ಅಚಾತುರ್ಯದಿಂದ ಆಗಿರುವ ಪ್ರಮಾದ. ವಾಟ್ಸ್ಯಾಪ್ ಗ್ರೂಪ್‍ಗೆ ಯಾರೋ ಕಳುಹಿಸಿದ ಸಂದೇಶವನ್ನು ಕಣ್ತಪ್ಪಿನಿಂದ ಮರು ಫಾರ್ವರ್ಡ್ ಮಾಡಿದ್ದೆ. ಅಚಾತುರ್ಯ ಗಮನಕ್ಕೆ ಬಂದ ಕೂಡಲೇ ಸಂದೇಶ ಡಿಲೀಟ್ ಮಾಡಿದ್ದೆ. ಜತೆಗೆ ರಾಜ್ಯದ ಜನತೆ ಎದುರು ಕ್ಷಮೆ ಕೇಳಿದ್ದೇನೆ. ನಮ್ಮ ಕುಟುಂಬ ತಲೆಮಾರುಗಳಿಂದ ಆಚಾರ-ವಿಚಾರ, ಸಂಪ್ರದಾಯ ನಂಬಿಕೊಂಡು ಬಂದಿದೆ. ನಾವು ಎಂದಿಗೂ ಯಾವುದೇ ಧರ್ಮವನ್ನಾಗಲಿ, ಅಲ್ಲಿನ ನಂಬಿಕೆಗಳನ್ನಾಗಲೀ ಅಪಮಾನಿಸಿಲ್ಲ' ಎಂದು ನಿರಾಣಿ ಹೇಳಿದ್ದಾರೆ.