ಆನೇಕಲ್(ಬೆಂಗಳೂರು ನಗರ):ಅತಿ ವೇಗವಾಗಿ ಬಂದ ಲಾರಿಯೊಂದು ರಸ್ತೆ ದಾಟುತ್ತಿದ್ದ ಮಹಿಳೆಯರ ಮೇಲೆ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಬೆಂಗಳೂರು - ಹೊಸೂರು ರಾಷ್ಟೀಯ ಹೆದ್ದಾರಿ 44 ರ ಬೊಮ್ಮಸಂದ್ರದ ಬಳಿ ಸಂಭವಿಸಿದೆ. ಆಂಧ್ರಪ್ರದೇಶ ಮೂಲದ ಮದನಪಲ್ಲಿಯ ನಿವಾಸಿ ಎಂಟು ತಿಂಗಳ ಗರ್ಭಿಣಿ ರುಕಿಯಾ (28) ಹಾಗೂ ಲಕ್ಷ್ಮಮ್ಮ (50) ಮೃತ ದುರ್ದೈವಿಗಳು.
ಗುರುವಾರ ಬೆಳಗ್ಗೆ 11 ಗಂಟೆಗೆ ಇಬ್ಬರು ಮಹಿಳೆಯರು ಖಾಸಗಿ ಆಸ್ಪತ್ರೆಗೆ ಹೋಗುವಾಗ ಹೆದ್ದಾರಿ ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರುಕಿಯಾ ಎಂಟು ತಿಂಗಳ ತುಂಬು ಗರ್ಭಿಣಿ. ಹೊಟ್ಟೆಯಲ್ಲಿ ಬೆಳೆಯತ್ತಿದ್ದ ಮಗುವಿನ ಹೃದಯದಲ್ಲಿ ರಂಧ್ರವಿದೆ ಎಂದು ವೈದ್ಯರು ಸಲಹೆ ನೀಡಿದ ಹಿನ್ನೆಲೆ ಅಕ್ಕ ರಾಬಿಯಾ ಜೊತೆಗೆ ಗರ್ಭಿಣಿ ರುಕಿಯಾ ಆಂಧ್ರಪ್ರದೇಶದ ಮದನಪಲ್ಲಿಯಿಂದ ವರ್ತೂರಿಗೆ ಬಂದಿದ್ದರು. ಲಕ್ಷ್ಮಮ್ಮ ವರ್ತೂರಿನಲ್ಲಿ ನೆಲೆಸಿದ್ದರು. ರೂಕಿಯಾಗೆ ಲಕ್ಷ್ಮಮ್ಮ ನ ಪರಿಚಯವಿತ್ತು. ಲಕ್ಷಮ್ಮ, ರೂಕಿಯಾ ತನ್ನ ಅಕ್ಕ ರಾಬಿಯಾ ಸೇರಿಕೊಂಡು ಗುರುವಾರ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಹೊರಟಿದ್ದರು.
ರೂಕಿಯಾ ಎಂಟು ತಿಂಗಳು ಗರ್ಭಿಣಿಯಾಗಿದ್ದರಿಂದ ಸ್ಕೈವಾಕ್ ಹತ್ತಲು ಆಗದಿದ್ದರಿಂದ ಬಸ್ ಇಳಿದವರೇ ನೇರ ಹೆದ್ದಾರಿ ದಾಟಿ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಹೋಗುತ್ತಿದ್ದರು. ಈ ವೇಳೆ, ಬೆಂಗಳೂರಿನ ಕಡೆಯಿಂದ ಅತ್ತಿಬೆಲೆ ಕಡೆಗೆ ಹೊರಟಿದ್ದ ಲಾರಿಯೊಂದು ವೇಗವಾಗಿ ಬಂದು ಗರ್ಭಿಣಿ ಸೇರಿ ಪರಿಚಯವಿದ್ದ ಮಹಿಳೆಯ ಮೇಲೆ ಲಾರಿ ಹರಿದ ಪರಿಣಾಮ ಎರಡು ದೇಹಗಳು ಛಿದ್ರಗೊಂಡಿವೆ. ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.