ಯಲಹಂಕ: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಮುಂಜಾನೆ ಏಕಕಾಲದಲ್ಲಿ ಡಾ. ಬಿ. ಸುಧಾ ಮನೆ ಮತ್ತು ಕಚೇರಿ ಸೇರಿದಂತೆ 6 ಕಡೆಗಳಲ್ಲಿ ದಾಳಿ ನಡೆದಿದೆ.
ಡಾ.ಬಿ.ಸುಧಾ ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದರು. ಈ ಸಮಯದಲ್ಲಿ ಭೂ ಪರಿಹಾರ ನೀಡುವ ವಿಚಾರದಲ್ಲಿ ತಮ್ಮ ಪತಿ ಮತ್ತು ದಲ್ಲಾಳಿಗಳ ಮೂಲಕ ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿತ್ತು. ತಮ್ಮ ಸಂಬಳಕ್ಕಿಂತಲೂ ಹೆಚ್ಚಿನ ಆದಾಯ ಹೊಂದಿರುವ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ಲೋಕಾಯುಕ್ತದಲ್ಲಿ ಸುಧಾ ಅವರ ವಿರುದ್ಧ ದೂರು ಸಹ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಲೋಕಾಯುಕ್ತರು ಇದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಿದ್ದರು.
ಹಾಗಾಗಿ, ಇಂದು ಬೆಳಗ್ಗೆ ಎಸಿಬಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ಡಾ. ಸುಧಾ ಅವರ ನಿವಾಸ ಕೊಡಿಗೆ ಹಳ್ಳಿಯ ಭವ್ಯ ವಿಲ್ಲಾ, ಯಲಹಂಕದಲ್ಲಿ ಒಂದು ಫ್ಲ್ಯಾಟ್, ಬ್ಯಾಟರಾಯನಪುರದ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೆಜಿಗಟ್ಟಲೆ ಚಿನ್ನಾಭರಣ, ₹10 ಲಕ್ಷ ನಗದು, ಆಸ್ತಿ ಪತ್ರಗಳು, ಐಷಾರಾಮಿ ಕಾರು ಸಿಕ್ಕಿವೆ.