ಬೆಂಗಳೂರು:ಅಕ್ರಮ ಮರಳು ದಂಧೆ ಪ್ರಕರಣ ಮುಚ್ಚಿ ಹಾಕಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ ಚನ್ನಣ್ಣನವರ ಅವರನ್ನು ಅಮಾನತು ಮಾಡಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ( ಆಪ್) ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್.ವಿ. ಸದಂ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ''ಕ್ರಷರ್ ಉದ್ಯಮಿ ಸೇರಿ ಹಲವರಿಂದ 3.96 ಕೋಟಿ ರೂ. ಮೊತ್ತ ವಂಚನೆಯಾಗಿದೆ ಎಂದು ಸಲ್ಲಿಕೆಯಾಗಿದ್ದ ದೂರು ಆಧರಿಸಿ ಆರೋಪಿಗಳ ವಿರುದ್ಧ ರವಿ ಡಿ ಚನ್ನಣ್ಣನವರ ಹಾಗೂ ಇತರ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕಾಗಿತ್ತು. ಆದರೆ, 'ಬೇಲಿಯೇ ಎದ್ದು ಹೊಲ ಮೇಯ್ತು' ಎಂಬ ಗಾದೆಯಂತೆ, ಪೊಲೀಸ್ ಅಧಿಕಾರಿಗಳೇ ಆರೋಪಿಗಳಿಂದ 50 ಲಕ್ಷ ರೂ. ಲಂಚ ಪಡೆದಿರುವ ಆರೋಪ ಕೇಳಿ ಬಂದಿದೆ. ಇಂತಹ ಗಂಭೀರ ಆರೋಪ ಹೊತ್ತಿರುವ ರವಿ.ಡಿ. ಚನ್ನಣ್ಣನವರ ಅವರು ಸಿಐಡಿ ಎಸ್ಪಿ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ. ತಕ್ಷಣವೇ ಅಮಾನತು ಮಾಡಿ ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು'' ಎಂದು ಆಗ್ರಹಿಸಿದರು.