ಬೆಂಗಳೂರು: ಕೇಂದ್ರ ಸರ್ಕಾರದಡಿ ಬರುವ ಐಬಿಪಿಎಸ್ (ಇನ್ಸ್ಟಿಟ್ಯೂಟ್ ಫಾರ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್) ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ನಡೆಸುತ್ತಿರುವುದೇಕೆ? ಕನ್ನಡ ಹಾಗೂ ಇತರೆ ಭಾಷಿಗರು ಅವಕಾಶ ವಂಚಿತರಾಗುವುದಿಲ್ಲವೇ ಎಂದು ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಡಾ.ರಮೇಶ್ ಬೆಲ್ಲಂಕೊಂಡ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಪರೀಕ್ಷೆಯಲ್ಲಿ ಹಿಂದಿಯೇತರ ಭಾಷೆಗಳ ಕಡೆಗಣನೆಗೆ ಸಂಬಂಧಿಸಿದಂತೆ ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿರುವ ಹಿಂದಿ ಮಾತೃಭಾಷಿಗರು ಹಿಂದಿಯಲ್ಲೇ ಪರೀಕ್ಷೆ ತೆಗೆದುಕೊಳ್ಳಬಹುದಾದರೆ, ಕನ್ನಡಿಗರು ಹಾಗೂ ದೇಶದ ಇನ್ನಿತರ ಮಾತೃಭಾಷಿಗರಿಗೂ ಅವರದೇ ಭಾಷೆಯ ಆಯ್ಕೆ ಏಕಿಲ್ಲ ಎಂದು ಕೇಳಿದರು. ತಮ್ಮ ಮಾತೃಭಾಷೆಯನ್ನು ಬಿಟ್ಟು ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ತೆಗೆದುಕೊಳ್ಳುವ ಅನಿವಾರ್ಯ ವಾತಾವರಣ ಏಕಿದೆ ಎಂದು ಕಿಡಿಕಾರಿದರು.
ಇದು ಹಿಂದಿ ಹೇರಿಕೆ ಹಾಗೂ ಹಿಂದಿಯೇತರರನ್ನು 2ನೇ ದರ್ಜೆ ಭಾರತೀಯರನ್ನಾಗಿ ಪರಿಗಣಿಸುವ ಕುತಂತ್ರ. ಅಂದಾಜು ಏಳು ಕೋಟಿ ಕನ್ನಡಿಗರು ಕರ್ನಾಟಕದಲ್ಲಿ ಹಾಗೂ ಅಂದಾಜು 82 ಕೋಟಿ ಹಿಂದಿಯೇತರರು ಭಾರತದಲ್ಲಿದ್ದಾರೆ. ಈ ಕಾರ್ಯವು ಇವರನ್ನು ಗುಲಾಮಗಿರಿಗೆ ತಳ್ಳುವ ಪ್ರಯತ್ನವಲ್ಲವೇ? ಎಂದು ಹೇಳಿದರು.