ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಳೆದ ಶುಕ್ರವಾರ 14 ನೇ ತಾರೀಖಿನಂದು ಜೀಬ್ರಾ ಮರಿಯೊಂದು ಜನಿಸಿದೆ ಅಂತಾ ಮೃಗಾಲಯ ತಿಳಿಸಿದೆ. ಇದು ಹತ್ತು ವರ್ಷದ ಕಾವೇರಿ - ಭರತ್ ಜೀಬ್ರಾಗಳ ಮುದ್ದಿನ ಮರಿಯಾಗಿದ್ದು, ಈ ಮೂಲಕ ಮೃಗಾಲಯದ ಒಟ್ಟು ಜೀಬ್ರಾಗಳ ಸಂಖ್ಯೆ 6ಕ್ಕೆ ಏರಿದೆ. ತಾಯಿ ಮತ್ತು ಮರಿ ಎರಡೂ ಆರೋಗ್ಯಕರವಾಗಿದ್ದು, ಮರಿಯ ಲಿಂಗವನ್ನು ಇನ್ನೂ ಗುರುತಿಸಿಲ್ಲ ಎಂದು ತಿಳಿಸಿದೆ.
"ತಾಯಿ ಮತ್ತು ಮರಿ ಗಾಬರಿಯಾಗದಂತೆ ಅವುಗಳ ಸುರಕ್ಷತೆಗಾಗಿ ವಿಶೇಷ ಕಾಳಜಿಯನ್ನು ವಹಿಸಲಾಗಿದೆ. ಎಳೆ ಮರಿ ಜೀಬ್ರಾ ಮತ್ತು ತಾಯಿ ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲಕರ ವೀಕ್ಷಣೆಯಲ್ಲಿದೆ" ಎಂದು ಸಹಾಯಕ ನಿರ್ದೇಶಕರು (ಪ.ಸೇ) ಡಾ. ಕೆ.ಎಸ್ ಉಮಾಶಂಕರ್ ತಿಳಿಸಿದ್ದಾರೆ. ಜೊತೆಗೆ, "ಮರಿಯ ಸುರಕ್ಷತೆ ಕಾಪಾಡಲು ಆವರಣದೊಳಗೆ ಪ್ರತ್ಯೇಕ ವಿಭಾಗಕ್ಕೆ ವ್ಯವಸ್ಥೆ ಮಾಡಲಾಗಿದೆ. ತಾಯಿ ಮತ್ತು ಮರಿಗಳಿಗೆ ಉತ್ತಮ ಆರೈಕೆಯನ್ನು ಮುತುವರ್ಜಿ ವಹಿಸಿ ಮಾಡಲಾಗಿದೆ" ಎಂದು ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸುನೀಲ್ ಪಂವಾರ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಜೀಬ್ರಾಗಳ ಗರ್ಭಾವಸ್ಥೆಯ ಅವಧಿಯು ಒಂದು ವರ್ಷಗಳಾಗಿದ್ದು, ಮರಿಯು ಕಂದು ಬಣ್ಣದ ಪಟ್ಟೆಗಳನ್ನು ಹೊಂದಿದೆ, ಅದು ಅಂತಿಮವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಸಂದರ್ಶಕರು ಮೃಗಾಲಯಕ್ಕೆ ಭೇಟಿ ನೀಡಿದಾಗ ನವಜಾತ ಜೀಬ್ರಾ ಮರಿಯನ್ನು ನೋಡಿ ಆನಂದಿಸಬಹುದು ಎಂದು ಮೃಗಾಲಯ ತಿಳಿಸಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಸಹ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಾವೇರಿ - ಭರತ್ ಜೋಡಿಗೆ ಮರಿಯೊಂದು ಜನಿಸಿತ್ತು.
ತಾಯಿ ಜೀಬ್ರಾ ಜೊತೆ ಮುದ್ದಾದ ಮರಿ ಇದನ್ನೂ ಓದಿ :ಹೆಣ್ಣು ಮರಿಗೆ ಜನ್ಮ ನೀಡಿದ ಪ್ರಾಚಿ ಜೀಬ್ರಾ.. ಚಾಮರಾಜೇಂದ್ರ ಮೃಗಾಲಯದಲ್ಲಿ ಸಂಭ್ರಮ
ಮೊಸಳೆ ಪ್ರತ್ಯಕ್ಷ: ಕಳೆದ ಮೂರು ದಿನಗಳ ಹಿಂದಷ್ಟೇ ಬನ್ನೇರುಘಟ್ಟ ಮೃಗಾಲಯದ ಬೋಟಿಂಗ್ ಕೊಳದಲ್ಲಿ ಮೊಸಳೆಯೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು. ಪ್ರತಿ ದಿನ ಬೋಟಿಂಗ್ ಮಾಡಲು ಮೃಗಾಲಯಕ್ಕೆ ಬರುವ ಪ್ರೇಕ್ಷಕರಿಗೆ ಆತಂಕ ಮೂಡಿಸಿತ್ತು. ಸಹಜವಾಗಿ ಮೃಗಾಲಯದಲ್ಲಿರುವ ಮೊಸಳೆಗಳು ಮಾತ್ರವಲ್ಲದೇ ಮೃಗಾಲಯದ ಆಚೆಯಿಂದ ಸಹ ಮೊಸಳೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಮೊಸಳೆ ಕಾಣಿಸಿಕೊಂಡ ನಂತರ ಕೊಳದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಯಿತು. ಕೂಡಲೇ ಸ್ಥಳಕ್ಕೆ ಅಧಿಕಾರಿಗಳು ಧಾವಿಸಿ, ಮೊಸಳೆಯನ್ನು ಸ್ಥಳಾಂತರಿಸಿದರು.
ಇದನ್ನೂ ಓದಿ :ಅಲಿಪುರ ಮೃಗಾಲಯಕ್ಕೆ ಶೀಘ್ರ ಹೊಸ ಅತಿಥಿಗಳ ಆಗಮನ: ಜೀಬ್ರಾಗಳ ಸ್ವಾಗತಕ್ಕೆ ಸಿಬ್ಬಂದಿ ಸಿದ್ಧತೆ
ಇನ್ನು ಅಲಿಪುರ ಮೃಗಾಲಯಕ್ಕೆ ಶೀಘ್ರ ಹೊಸ ಅತಿಥಿಗಳು ಬರುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಕೇಂದ್ರ ಹಾಗೂ ರಾಜ್ಯ ಮೃಗಾಲಯದ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಮಾಹಿತಿ ಪ್ರಕಾರ, ಮೂರು ಜೋಡಿ ಜೀಬ್ರಾಗಳನ್ನು ಅಲಿಪುರ ಮೃಗಾಲಯಕ್ಕೆ ಕರೆ ತರಲಾಗುತ್ತಿದೆ. 3 ಗಂಡು ಮತ್ತು 3 ಹೆಣ್ಣು ಜೀಬ್ರಾಗಳನ್ನು ದಕ್ಷಿಣ ಆಫ್ರಿಕಾದ ಲಿಂಪೊಪೊ ಮಿಸ್ಟಿಕ್ ಮಂಕೀಸ್ ಮತ್ತು ಫೆದರ್ಸ್ ವೈಲ್ಡ್‌ಲೈಫ್ ಪಾರ್ಕ್‌ನಿಂದ ತರಲಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಅರಣ್ಯ ಇಲಾಖೆ ಮತ್ತು ಅಲಿಪುರ ಮೃಗಾಲಯದ ಪ್ರಾಧಿಕಾರ ಈಗಾಗಲೇ ಅಧಿಕೃತ ಪ್ರಕ್ರಿಯೆ ಆರಂಭಿಸಿದೆ ಎಂದು ಕಳೆದ ಮಾರ್ಚ್ ತಿಂಗಳಲ್ಲಿ ತಿಳಿಸಲಾಗಿತ್ತು. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. 37 ಲಕ್ಷದ 24 ಸಾವಿರ ದರ ನಿಗದಿಪಡಿಸಲಾಗಿದೆ. ಜೀಬ್ರಾಗಳನ್ನು ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ ಕಾರ್ಯಕ್ರಮದ ಮೂಲಕ ಕರೆತರುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಅಲಿಪುರ ಮೃಗಾಲಯದಲ್ಲಿ ಜೀಬ್ರಾಗಳಿಗಾಗಿ ಪ್ರತ್ಯೇಕ ಆವರಣ ಮತ್ತು ರಾತ್ರಿ ಶೆಲ್ಟರ್‌ಗಳನ್ನು ಮಾಡಲಾಗುತ್ತಿದೆ.