ಬೆಂಗಳೂರು: ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ವೃದ್ಧರಿಗೆ ಆಸೆ ತೋರಿಸಿ, ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಕೊಂಡು ನಂತರ ಬಡ್ಡಿ ಹಾಗೂ ಅಸಲು ಹಣವನ್ನು ನೀಡದೆ ಪರಾರಿಯಾಗಿದ್ದ ಚಿಟ್ ಫಂಡ್ ಕಂಪನಿ ಮಾಲಕಿಯನ್ನು ರಾಜಾಜಿನಗರ ಪೊಲೀಸರು ಕಲ್ಯಾಣ ಮಂಟಪವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಬಂಧಿಸಿದ್ದಾರೆ.
ಲಕ್ಷ್ಮೀವಾಣಿ ಬಂಧಿತ ಆರೋಪಿ. ಕೆಲ ವರ್ಷಗಳ ಹಿಂದೆ ಲಗ್ಗೆರೆಯಲ್ಲಿ ವಾರಿಧಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಲಕ್ಷ್ಮೀ ಪ್ರಾರಂಭಿಸಿದ್ದರು. ನಂತರ ರಾಜಾಜಿನಗರದಲ್ಲಿ ಮತ್ತೊಂದು ಬ್ರಾಂಚ್ ಓಪನ್ ಮಾಡಿದ್ದರು. ಲಕ್ಷ್ಮೀ ಮೊದಲು ತನ್ನ ಗಂಡನನ್ನೇ ಮ್ಯಾನೇಜಿಂಗ್ ಡೈರೆಕ್ಟರ್ ಮಾಡಿಕೊಂಡಿದ್ದರು. ಬಳಿಕ ಕಂಪನಿಗೆ ಕೆಲಸಗಾರರನ್ನು ನೇಮಕ ಮಾಡಿಕೊಂಡು ನಂತರ ಇವರಿಗೆ ಗೊತ್ತಿಲ್ಲದಂತೆ ಡೈರೆಕ್ಟರ್ಗಳಾಗಿ ಮಾಡಿ ಜನರಿಗೆ ಪರಿಚಯಿಸುತ್ತಿದ್ದರು.
ಓದಿ:ಚಿಟ್ ಫಂಡ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ದೋಖಾ: ಆರೋಪಿ ಅಂದರ್
ವೃದ್ಧರನ್ನೇ ಟಾರ್ಗೆಟ್ ಮಾಡುತ್ತಿದ್ದ ಲಕ್ಷ್ಮೀ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶಗಳಿಸಬಹುದು ಎಂದು ಆಸೆ ತೋರಿಸಿ ಅವರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದರು ಎನ್ನಲಾಗ್ತಿದೆ. ಕಳೆದ ವರ್ಷ ಇದೇ ಮಾದರಿಯಲ್ಲಿ ಬೃಂದಾವನ ಚಿಟ್ ಫಂಡ್ ಕಂಪನಿ ವಂಚನೆ ಬೆಳಕಿಗೆ ಬಂದ ನಂತರ ಎಚ್ಚೆತ್ತುಕೊಂಡ ಗ್ರಾಹಕರು, ರಾಜಾಜಿನಗರ ಪೊಲೀಸ್ ಠಾಣೆಗೆ ಈ ಚಿಟ್ ಫಂಡ್ ವಿಚಾರವಾಗಿ ದೂರು ನೀಡಿದ್ದರು. ಕೇಸ್ ದಾಖಲಾಗ್ತಿದ್ದಂತೆ ಲಕ್ಷ್ಮೀವಾಣಿ ಪರಾರಿಯಾಗಿದ್ದರು. ಸತತವಾಗಿ ಒಂದು ವರ್ಷ ಹುಡುಕಾಟ ನಡೆಸಿದ ರಾಜಾಜಿನಗರ ಪೊಲೀಸರು ಕೊನೆಗೂ ಲಕ್ಷ್ಮೀಯನ್ನ ಪತ್ತೆ ಮಾಡಿದ್ದಾರೆ.
ವಿಪರ್ಯಾಸ ಅಂದ್ರೆ ಲಕ್ಷ್ಮೀ ಜೀವನ ನಿರ್ವಹಣೆಗಾಗಿ ಕಲ್ಯಾಣಮಂಟಪವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದ ಬಳಿಕ ಖಾಕಿ ಬಲೆಗೆ ಲಕ್ಷ್ಮೀ ಬಿದ್ದಿದ್ದು, ಕಳೆದ ಆಗಸ್ಟ್ ನಲ್ಲಿ ಲಕ್ಷ್ಮೀ ವಿರುದ್ಧ ದೂರು ದಾಖಲಾಗಿತ್ತು.