ಕರ್ನಾಟಕ

karnataka

ETV Bharat / state

ಜಾಹೀರಾತು ಆದಾಯ ಸಂಗ್ರಹ ವಿಚಾರ: ಪಾಲಿಕೆಯಲ್ಲಿ ಚರ್ಚೆ? - commercial hoardings

ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್, ಅನಧಿಕೃತ ಜಾಹೀರಾತು ಬ್ಯಾನ್ ಆಗಿರುವುದು ಎಲ್ಲರಿಗೂ ತಿಳಿದಿದೆ. ಹೈಕೋರ್ಟ್ ಕೂಡಾ ಅನೇಕ ಬಾರಿ ಚಾಟಿ ಬೀಸಿದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಆರೋಪಿಸಿದ್ದಾರೆ.

commercial-hoardings-income
ಜಾಹೀರಾತು ಆದಾಯ

By

Published : Dec 29, 2020, 5:13 PM IST

ಬೆಂಗಳೂರು: ಪಾಲಿಕೆಯ ಪ್ರಮುಖ ಆದಾಯ ಮೂಲವಾಗಬೇಕಿದ್ದ ಜಾಹೀರಾತು, ಹೋರ್ಡಿಂಗ್ಸ್​​ಗಳು ನಿಷೇಧಗೊಂಡಿವೆ. ನಗರದಲ್ಲಿ ಅನಧಿಕೃತ ಜಾಹೀರಾತುಗಳ ಭರಾಟೆ ಹೆಚ್ಚಿದ್ದರಿಂದ ಎಲ್ಲಾ ಬಗೆಯ ವಾಣಿಜ್ಯ ಜಾಹೀರಾತುಗಳು 2018ರಲ್ಲೇ ನಿಷೇಧಕ್ಕೆ ಒಳಪಟ್ಟಿವೆ.

ಆದರೆ, ನಗರದಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಿಸಿದ, ಪಾದಾಚಾರಿ ಮೇಲ್ಸೇತುವೆ, ಬಸ್ ಶೆಲ್ಟರ್ ಹಾಗೂ ಕೆಲ ಶೌಚಾಲಯಗಳಲ್ಲಿ ಪೊಲೀಸ್ ಚೌಕಿಗಳಲ್ಲಿ ಮಾತ್ರ ಜಾಹೀರಾತು ಪ್ರದರ್ಶಿಸಬಹುದೇ ಹೊರತು ವಾಣಿಜ್ಯ ಜಾಹೀರಾತುಗಳನ್ನು ಹೋರ್ಡಿಂಗ್ಸ್, ಫ್ಲೆಕ್ಸ್​​ಗಳಲ್ಲಿ ಪ್ರದರ್ಶನ ಮಾಡುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ 'ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ -2018'(ಔಟ್ ಡೋರ್ ಸೈನೇಜ್ ಮತ್ತು ಪಬ್ಲಿಕ್ ಮೆಸೇಜ್ ಬೈಲಾ-2018) ಜಾರಿಯಲ್ಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿರುವ 586 ಬಸ್ ತಂಗುದಾಣ, 30 ಪಾದಚಾರಿ ಮೇಲ್ಸೇತುವೆಗಳಿದ್ದು, ಅದರ ನಿರ್ಮಾಣ ವೆಚ್ಚವನ್ನು ಜಾಹೀರಾತು ಮೂಲಕ ಗಳಿಸಿಕೊಳ್ಳಲು ಬಿಬಿಎಂಪಿ 20 ವರ್ಷಗಳ ಕಾಲ ಗುತ್ತಿಗೆ ನೀಡಿದೆ. ಇದರ ನೆಲಬಾಡಿಗೆ ಮಾತ್ರ ವರ್ಷಕ್ಕೆ ₹3 - 4 ಕೋಟಿ ಪಾಲಿಕೆಗೆ ಆದಾಯವಾಗಿ ಬರುತ್ತಿದೆ. ಬೈಲಾದ ಸೆಕ್ಷನ್ 12.4, 11.3 ಪ್ರಕಾರ ಜಾಹೀರಾತುಗಳಿಂದ ಜಿಎಸ್​ಟಿ ಶುಲ್ಕ ಸಂಗ್ರಹಿಸುವ ಕುರಿತು ಪಾಲಿಕೆಯಲ್ಲಿ ಚರ್ಚೆ ನಡೆಯುತ್ತಿದ್ದು, ಕಾನೂನು ಸಲಹೆ ಕೇಳಲಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಜಾಹೀರಾತು ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ...ಜೆಡಿಎಸ್‌ ಜಾತ್ಯತೀತತೆ ಪರೀಕ್ಷಿಸಲು ಹೊರಟವರಿಗೆ ಧರ್ಮೇಗೌಡರ ಸಾವೇ ಉತ್ತರ: ಹೆಚ್‌ಡಿಕೆ ಕಣ್ಣೀರು

ಮತ್ತೆ ಜಾಹೀರಾತು ಅಳವಡಿಕೆಗೆ ಚರ್ಚೆ:ಜಾಹೀರಾತು ಮಾಫಿಯಾ ವಿಚಾರ ಹೈಕೋರ್ಟ್, ಲೋಕಾಯುಕ್ತ ಅಂಗಳದಲ್ಲಿ ಇರುವಾಗಲೇ ಸರ್ಕಾರದ ಹಂತದಲ್ಲಿ ಮತ್ತೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಮಾತುಕತೆ ನಡೆಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಆರೋಪಿಸಿದರು.

ಕೋವಿಡ್ ಹಿನ್ನೆಲೆ ಸಾಕಷ್ಟು ಉದ್ಯಮಗಳು ನಷ್ಟದಲ್ಲಿರುವುದರಿಂದ ಬಸ್ ಶೆಲ್ಟರ್​​ಗಳಲ್ಲೂ ಜಾಹೀರಾತು ಪ್ರದರ್ಶಿಸಲು ಪೈಪೋಟಿಯೂ ಕಂಡು ಬರುತ್ತಿಲ್ಲ. ಲಾಕ್​ಡೌನ್​​​ನಿಂದ ನಷ್ಟಕ್ಕೊಳಗಾದ ಉದ್ಯಮಗಳು ಹಬ್ಬದ ಸಮಯದಲ್ಲಿ ಕೊಂಚಮಟ್ಟಿಗೆ ಚೇತರಿಸಿಕೊಂಡಿವಿಯಷ್ಟೆ. ಪ್ರಮುಖ ರಸ್ತೆಯ ಬಸ್ ತಂಗುದಾಣಗಳೇ ಜಾಹೀರಾತುಗಳಿಲ್ಲದೇ ಖಾಲಿ ಬಿದ್ದಿವೆ. ಜಾಹೀರಾತುಗಳಿದ್ದರೂ ಅವುಗಳನ್ನು ಗುತ್ತಿಗೆಗೆ ನೀಡಿರುವುದರಿಂದ ಪಾಲಿಕೆಗೆ ಸಂಪೂರ್ಣ ಆದಾಯ ಬರುತ್ತಿಲ್ಲ. ಗುತ್ತಿಗೆ ನೀಡಿದಷ್ಟು ವರ್ಷ ಇದನ್ನು ನಿರ್ಮಾಣ ಮಾಡಿರುವ ಸಂಸ್ಥೆಗಳೇ ಜಾಹೀರಾತು ಶುಲ್ಕ ಪಡೆಯಲಿವೆ.

ಇದನ್ನೂ ಓದಿ...ರಾಜಧಾನಿಯಲ್ಲಿ ಮುಂದುವರಿದ ನೀರು ಮರುಬಳಕೆ ಗೊಂದಲ!

ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ:ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳನ್ನು ಕಡ್ಡಾಯವಾಗಿ ನಿಷೇಧಿಸಿದ್ದರೂ ನಗರದ ಅಲ್ಲಲ್ಲಿ ಫ್ಲೆಕ್ಸ್ ಅಳವಡಿಕೆ, ಗೋಡೆ ಬರಹದ ಮೂಲಕ ಜಾಹೀರಾತು ಪ್ರದರ್ಶನ ನಡೆಯುತ್ತಿದೆ. ಇದನ್ನು ತಡೆದು, ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸುವ ಗೋಜಿಗೆ ಪಾಲಿಕೆ ವಲಯವಾರು ಅಧಿಕಾರಿಗಳು ಹೋಗುತ್ತಿಲ್ಲ. ಪಾಲಿಕೆ ಕೇಂದ್ರ ಕಚೇರಿಯಲ್ಲೂ ಈ ಬಗ್ಗೆ ಮಾಹಿತಿ ಲಭ್ಯವಿಲ್ಲ. ಜಾಹೀರಾತುಗಳನ್ನು ತೆರವು ಮಾಡಿದ್ದರೂ, ಕಬ್ಬಿಣದ ಸ್ಟ್ರಕ್ಚರ್​​ಗಳು ಹಾಗೇ ಉಳಿದಿದ್ದು, ತೆರವಿಗೂ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಇತ್ತೀಚೆಗೆ ನಗರದಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಲು ಷರತ್ತುಗಳೊಂದಿಗೆ ಫ್ಲೆಕ್ಸ್ ಅಳವಡಿಸಲು ಹೈಕೋರ್ಟ್ ಸಮ್ಮತಿಸಿತ್ತು. ಆದರೆ, ನಿಯಮ ಉಲ್ಲಂಘಿಸಿ ಕೆಲ ಖಾಸಗಿ ಕಂಪನಿಗಳು ಪ್ರಾಯೋಕತ್ವ ಪಡೆದು ಕೋವಿಡ್ ಮುನ್ನೆಚ್ಚರಿಕೆ ಫ್ಲೆಕ್ಸ್​​ಗಳಲ್ಲಿ ಕಂಪನಿಗಳ ಕುರಿತು ಜಾಹೀರಾತು ಪ್ರದರ್ಶಿಸಿದ್ದವು. ತಿಳಿದ ಕೂಡಲೇ ಪಾಲಿಕೆಗೆ ಚಾಟಿ ಬೀಸಿದ ಹೈಕೋರ್ಟ್, ಕೂಡಲೇ ಜಾಹೀರಾತು ತೆರವಿಗೆ ಸೂಚಿಸಿತ್ತು. ಹೈಕೋರ್ಟ್​ಗೆ ಲೆಕ್ಕಕೊಡಬೇಕಾದ ಹಿನ್ನೆಲೆ ಒಟ್ಟು 208 ಸ್ಥಳಗಳಲ್ಲಿದ್ದ ಅನಧಿಕೃತ 297 ಬ್ಯಾನರ್, ಹೋರ್ಡಿಂಗ್ಸ್​​ಗಳ ಪೈಕಿ ಸರ್ಕಾರದ ಆರೋಗ್ಯ ಇಲಾಖೆ 236 ಕಡೆ ತೆರವುಗೊಳಿಸಿದೆ. ಬಿಬಿಎಂಪಿ ಸರ್ವೇ ನಡೆಸಿ 61 ಕಡೆ ತೆರವು ಮಾಡಲಾಗಿದೆ ಎಂದು ಲೆಕ್ಕ ನೀಡಿದೆ.

ದೀಪಾವಳಿ ಶುಭಾಶಯ ಕೋರಿದ ಫ್ಲೆಕ್ಸ್, ಬ್ಯಾನರ್​​ಗಳು ನಗರದಾದ್ಯಂತ ರಾರಾಜಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಆಯುಕ್ತರ ಸುತ್ತೋಲೆಗಳಿಗೂ ಬೆಲೆ ಇಲ್ಲದಂತಾಗಿದೆ. ಇದನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು. ಜಾಹೀರಾತು ಅಳವಡಿಸುತ್ತಿದ್ದ ಕಬ್ಬಿಣದ ಚೌಕಟ್ಟುಗಳ ತೆರವಿಗೂ ಗಡುವು ನೀಡಿದ್ದರೂ, ಅಧಿಕಾರಿಗಳು ಈ ಕುರಿತು ಕಾರ್ಯಪ್ರವೃತ್ತರಾಗಿಲ್ಲ. ಇವೆಲ್ಲದರ ನಡುವೆ ಪಾಲಿಕೆಗೆ ಸಂಗ್ರಹಿಸಬಹುದಾದ ಜಾಹೀರಾತು ಆದಾಯದ ಬಗ್ಗೆ ಚರ್ಚೆ ನಡೆಯುತ್ತಿದೆ.

ABOUT THE AUTHOR

...view details