ಬೆಂಗಳೂರು:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದಿಂದ ಎ ಮಂಜು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಆಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕುಮಾರಸ್ವಾಮಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಅರಕಲಗೂಡು ಕ್ಷೇತ್ರದಿಂದ ಮಂಜು ಅವರು ಜೆಡಿಎಸ್ ಅಭ್ಯರ್ಥಿ ಆಗಲಿದ್ದಾರೆ. ಈಗಾಗಲೇ ಮಂಜು ಜೊತೆ ಮಾತುಕತೆ ನಡೆದಿದ್ದು, ಬಹುತೇಕ ಅಂತಿಮ ಹಂತದಲ್ಲಿದೆ. ಎಟಿ ರಾಮಸ್ವಾಮಿ ಹಾಗೂ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರು ಕಳೆದ ಎರಡು ವರ್ಷಗಳಿಂದ ನಮ್ಮ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಹಾಗಾಗಿ, ಅವರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಇದೇ ವೇಳೆ ಹಾಸನ ಕ್ಷೇತ್ರದ ಬಗ್ಗೆ ನಮ್ಮ ಕುಟುಂಬ ಸದಸ್ಯರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಅರಸೀಕೆರೆಯಲ್ಲಿ ಅಭ್ಯರ್ಥಿಗಳಿಗೆ ಕೊರತೆಯಿಲ್ಲ:ಇನ್ನು ಅರಸಿಕೆರೆಯಲ್ಲಿ ಶಿವಲಿಂಗೇಗೌಡರು ಹೊರತುಪಡಿಸಿ ಬೇರೆ ಅಭ್ಯರ್ಥಿಗಳಿದ್ದಾರೆ. ಅರಸೀಕೆರೆಯಲ್ಲಿ ಯಾವುದೇ ಅಭ್ಯರ್ಥಿ ಕೊರತೆಯಿಲ್ಲ ಎನ್ನುವ ಮೂಲಕ ಕಗ್ಗಂಟಾಗಿದ್ದ ಅಭ್ಯರ್ಥಿ ಆಯ್ಕೆಗೆ ಫುಲ್ ಸ್ಟಾಪ್ ಇಟ್ಟರು. ಶಿವಲಿಂಗೇಗೌಡರು ಹಾಗೂ ಎ.ಟಿ. ರಾಮಸ್ವಾಮಿ ಪಕ್ಷ ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಈಗ ಯಾವುದು ಕೂಡ ಗುಟ್ಟುಗಳಿಲ್ಲ. ಶಿವಲಿಂಗೇಗೌಡರು ಹಾಗೂ ಎ.ಟಿ.ರಾಮಸ್ವಾಮಿ ಅವರು ನಮ್ಮ ಪಕ್ಷದ ಯಾವುದೇ ಸಭೆಗಳಿಗೆ ಬಂದಿಲ್ಲ. ಎರಡು ವರ್ಷಗಳಿಂದ ನಮ್ಮ ಪಕ್ಷದಿಂದ ದೂರ ಇದ್ದಾರೆ. ನಾನು ಈಗಾಗಲೇ ಎ.ಮಂಜು ಅವರ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದರು.
ಕುಟುಂಬದವರು ಕೂತು ಚರ್ಚೆ: ಇನ್ನು ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಒಂದೆರಡು ದಿನಗಳಲ್ಲಿ ನಮ್ಮ ಕುಟುಂಬದವರು ಕುಳಿತು ಚರ್ಚಿಸಿ ಬಗೆಹರಿಸುತ್ತೇವೆ. ನಮ್ಮ ಕುಟುಂಬದಲ್ಲಿ ಯಾವುದೇ ಜಗಳವಿಲ್ಲ. ಗೊಂದಲವೂ ಇಲ್ಲ. ಈ ವಿಚಾರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ತರುವುದು ಬೇಡ. ಅವರು ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಅವರಿಗೆ ಘಾಸಿಯಾಗದಂತೆ ನಾವು ನಡೆದುಕೊಳ್ಳಬೇಕಿದೆ. ಹಾಗಾಗಿ, ದೇವೇಗೌಡರನ್ನು ಹಾಸನ ಟಿಕೆಟ್ ವಿಚಾರದಲ್ಲಿ ಎಳೆಯಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.