ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ವಯಸ್ಸಿಗೆ ಬಂದ ಯುವಕ ಯುವತಿಯರು ಹೆತ್ತವರ ಕಡೆ ಗಮನ ಕೊಡದೆ ತಮ್ಮ ಜೀವನ ನಡೆದರೆ ಸಾಕು ಎಂದಿರುತ್ತಾರೆ. ಆದರೆ ಇಲ್ಲೊಬ್ಬ ಯುವತಿ ತಾಯಿಯ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ದಾನ ಮಾಡಿ ಮಾದರಿಯಾಗಿದ್ದಾಳೆ.
ಬಾಂಗ್ಲಾದೇಶ ಮೂಲದ ಶಿಖಾರಾಣಿ ಎಂಬವರಿಗೆ ಕಿಡ್ನಿ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಪುತ್ರಿ ದೇವ್ ಶಾನ್ಬೋಜಯ ಸಿತ್ತಿ ಅವರು ಕಿಡ್ನಿದಾನ ಮಾಡಿದ್ದಾರೆ.
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶಿಖಾರಾಣಿಗೆ ಚಿಕಿತ್ಸೆ ಕೊಡಿಸಬೇಕೆಂದುಅವರ ಪುತ್ರಿ ದೇವ್ ಶಾನ್ಬೋಜಯ ಸಿತ್ತಿ ಅವರುವೆಬ್ಸೈಟ್ ಮೂಲಕ ಮಣಿಪಾಲ್ ಆಸ್ಪತ್ರೆ ಬಗ್ಗೆ ತಿಳಿದುಕೊಂಡಿದ್ದಾಳೆ. ಬಳಿಕ ಇಲ್ಲಿನ ಡಾಕ್ಟರ್ಗಳನ್ನು ಸಂಪರ್ಕಿಸಿದಾಗ, ತಮ್ಮ ಅಮ್ಮನಿಗೆ ಎರಡೂ ಕಿಡ್ನಿ ಹಾಳಾಗಿದ್ದು, ಯಾರಾದರೂ ಕಿಡ್ನಿ ದಾನ ಮಾಡಿದರೆ ನಿಮ್ಮಮ್ಮನನ್ನು ಉಳಿಸಬಹುದು ಎಂದು ಹೇಳಿದ್ದಾರೆ. ತಕ್ಷಣ ಹಿಂದೆ ಮುಂದೆ ಯೋಚಿಸದೆ ಮಗಳು ಅಮ್ಮನಿಗಾಗಿ ತನ್ನ ಕಿಡ್ನಿ ನೀಡಲು ಮುಂದಾಗಿದ್ದಾಳೆ.
ಆದರೆ ಮಗಳು ದೇವ್ ಶಾನ್ಬೋಜಯ ಸಿತ್ತಿಗೆ ನಿಶ್ಚಿತಾರ್ಥದ ಡೇಟ್ ಫಿಕ್ಸ್ ಆಗಿತ್ತು. ಕಿಡ್ನಿ ದಾನ ಮಾಡಬಾರದೆಂದು ಯುವಕ ಹೇಳಿದಕ್ಕೆ ಸಿತ್ತಿಯು ವಿರೋಧ ವ್ಯಕ್ತಪಡಿಸಿ ತನ್ನ ನಿಶ್ಚಿತಾರ್ಥವನ್ನೇ ಕಾನ್ಸಲ್ ಮಾಡಿ ಎಲ್ಲರ ಹುಬ್ಬೇರುವಂತಹ ತ್ಯಾಗ ಮಾಡಿದ್ದಾಳೆ ಈ ಮಹಾ ಮಗಳು.
ಇನ್ನು ಕಿಡ್ನಿದಾನದ ಬಗ್ಗೆ ಮಾತನಾಡಿದ ಮಣಿಪಾಲ ಆಸ್ಪತ್ರೆಯ ಮೂತ್ರಪಿಂಡ ರೋಗತಜ್ಞರಾದ ಡಾ. ಸನಕರನ್ ಸುಂದರ್, ಅಂಗದಾನಿಗಳಾಗುವಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಸಾಮಾನ್ಯವಾಗಿ ವಿವಾಹವಾಗದ ಯುವ ಮಹಿಳೆಯರು ಅಂಗದಾನ ಮಾಡುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಏಕೆಂದರೆ ಅವರ ಆರೋಗ್ಯ ಸ್ಥಿತಿಗಳನ್ನು ಆಧರಿಸಿ ಅವರ ಭವಿಷ್ಯಕ್ಕೆ ಇದು ಅಡ್ಡಿಯಾಗಬಹುದೆಂಬ ಆತಂಕವಿದೆ. ಆದರೆ, ದೃಢ ನಿಶ್ಚಯದ ಯುವತಿಯೊಬ್ಬಳು ಏನಾದರೂ ಮಾಡಿ ತನ್ನ ತಾಯಿಯನ್ನು ಬದುಕಿಸಬೇಕೆಂಬ ನಿರ್ಣಯ ಕೈಗೊಂಡಿದ್ದನ್ನು ಕಂಡು ನಾವು ಅಚ್ಚರಿಗೊಂಡಿದ್ದೆವು. ಮಗಳ ಧೈರ್ಯವನ್ನು ಮತ್ತು ಉದಾತ್ತವಾದ ಈ ಕ್ರಮಕ್ಕೆ ಅವರ ಪೋಷಕರನ್ನು ನಾವು ಅಭಿನಂದಿಸುತ್ತೇವೆ ಎಂದಿದ್ದಾರೆ.
ಒಟ್ಟಿನಲ್ಲಿ ತಮ್ಮ ಜೀವನಕ್ಕಾಗಿ ತಂದೆ-ತಾಯಿಯನ್ನು ಲೆಕ್ಕಿಸದ ಈ ಸಮಾಜದಲ್ಲಿ ತಾಯಿಗಾಗಿ ಮುಂದಿನ ಭವಿಷ್ಯದ ಬಗ್ಗೆ ಯೋಚಿಸದೆ ತನ್ನ ಒಂದು ಕಿಡ್ನಿದಾನ ಮಾಡಿದ್ದಾಳೆ. ಜನ್ಮ ನೀಡಿದ ಅಮ್ಮನನ್ನು ಉಳಿಸಿಕೊಂಡ ಸಂತೋಷ ಆಕೆಯ ಕಣ್ಣಿನಲ್ಲಿ ಕಾಣುತ್ತಿದೆ. ಆದರ್ಶ ಮೆರೆದ ಈ ಯುವತಿಗೆ ನಮ್ಮದೊಂದು ಸಲಾಂ.